Thursday, October 25, 2007

"ಟಿ.ಪಿ. ಕೈಲಾಸಂ" (೧೮೮೫-೧೯೪೬)

"ಟಿ.ಪಿ. ಕೈಲಾಸಂ" (೧೮೮೫-೧೯೪೬) ಶ್ರೀ ತ್ಯಾಗರಾಜ ಪರಮಶಿವ ಕೈಲಾಸಂ ಜನಿಸಿದ್ದು ೧೮೮೪ರ ಜುಲೈ ೨೯ರಂದು ಮೈಸೂರಿನಲ್ಲಿ. ತಂದೆ ಮೈಸೂರು ಸಂಸ್ಥಾನದ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ಪರಮಶಿವ ಅಯ್ಯರ್. ಮೈಸೂರು, ಬೆಂಗಳೂರು, ಹಾಸನದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಮದ್ರಾಸಿನಲ್ಲಿ ಕಾಲೇಜು ವಿದ್ಯಾಭ್ಯಾಸ ಮುಗಿಸಿ ಭೂಗರ್ಭ ಶಾಸ್ತ್ರದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಲಂಡನ್‍ನ ರಾಯಲ್ ಕಾಲೇಜಿಗೆ ಸೇರಿದರು. ಇಂಗ್ಲೆಂಡ್‍ನಲ್ಲಿ ಕೆಲವು ವರ್ಷಗಳ ಕಾಲ ಇದ್ದ ಅವರು ಅಲ್ಲಿನ ಸಂಗೀತ, ಸಾಹಿತ್ಯ, ನಾಟಕಗಳನ್ನು ಆಳವಾಗಿ ಅಭ್ಯಾಸ ಮಾಡಿದರು. ಇಂಗ್ಲಿಷ್ ರಂಗಭೂಮಿ ಅವರನ್ನು ಬಹುವಾಗಿ ಆಕರ್ಷಿಸಿತ್ತು. ನಾಟಕಗಳ ಬಗ್ಗೆ ವಿಶೇಷ ಒಲವನ್ನು ಅವರು ಬೆಳೆಸಿಕೊಂಡರು. ನಾಟಕವೆಂದರೆ ಪೌರಾಣಿಕ ನಾಟಕಗಳು, ಭಾರೀಯಾದ ಮೇಕಪ್ಪು, ದಿರಿಸು, ರಂಗಸಜ್ಜಿಕೆ ಎಂಬೆಲ್ಲ ಅಂಶಗಳಿಂದ ತುಂಬಿಹೋಗಿದ್ದ ನಾಟಕದ ಕಲ್ಪನೆಗೆ ಹೊಸ ರೂಪವನ್ನು ಕೈಲಾಸಂ ನೀಡಿದರು. ಹಾಸ್ಯ, ವ್ಯಂಗ್ಯ, ಕುಚೋದ್ಯಗಳಿಂದ ಕೂಡಿದ, ವಿನೋದಪೂರ್ಣ, ವಿಚಿತ್ರ ಚಕಮಕಿ ಸಂಭಾಷಣೆಯ ಪಾತ್ರಗಳು, ಸನ್ನಿವೇಶಗಳು ಕೈಲಾಸಂರಿಗೆ ಕೀರ್ತಿ ತಂದಿತ್ತವಲ್ಲದೆ ಕನ್ನಡ ರಂಗಭೂಮಿಗೆ ಹೊಸ ರೂಪವೊಂದನ್ನು ನೀಡಿದವು. ೧೯೧೫ರಲ್ಲಿ ಸಬ್ ಅಸಿಸ್ಟೆಂಟ್ ಜಿಯಾಲಜಿಸ್ಟ್ ವೃತ್ತಿಗೆ ಸೇರಿದ ಅವರು, ಕೆ.ಜಿ.ಎಫ್., ಬೆಂಗಳೂರು, ಶಿವಮೊಗ್ಗಗಳಲ್ಲಿ ಕೆಲಸ ಮಾಡಿದರೂ, ಕೆಲವು ವರ್ಷಗಳಲ್ಲೇ ರಾಜೀನಾಮೆ ನೀಡಿದರು. ವರದಾಚಾರ್ಯರ ಕಂಪನಿಯ ನಾಟಕಗಳಲ್ಲಿ ಅವರು ಪಾತ್ರ ವಹಿಸುತ್ತಿದ್ದರು. ಕೈಲಾಸಂ ಅವರು ರಚಿಸಿದ ನಾಟಕಗಳು ಅದೆಷ್ಟೋ. ಇಂಗ್ಲೀಷ್‍ನಲ್ಲಿ ಪ್ರಕಾಂಡ ಪಾಂಡಿತ್ಯ ಹೊಂದಿದ್ದ ಅವರಿಗೆ ಷೇಕ್ಸ್‍ಪಿಯರ್, ಷಾ, ವೈಲ್ಡ್, ಇಬ್ಸನ್ ನಾಟಕಗಳನ್ನು ರಾತ್ರಿಯಿಡೀ ಅಭಿನಯಿಸಿ ತೋರಿಸುವ ಗೀಳಿತ್ತು. ಕೈಲಾಸಂರವರ ಕೆಲವು ನಾಟಕಗಳೆಂದರೆ ಟೊಳ್ಳುಗಟ್ಟಿ (೧೯೨೨) ಪೋಲಿಕಿಟ್ಟಿ, ಬಹಿಷ್ಕಾರ, ಹೋಂ ರೂಲು, ಗಂಡಸ್ಕತ್ರಿ, ವೈದ್ಯನ ವ್ಯಾಧಿ, ತಾವರೆಕೆರೆ, ಹುತ್ತದಲ್ಲಿ ಹುತ್ತ, ಬಂಡ್ವಾಳಿಲ್ಲದ ಬಡಾಯಿ, ಅನುಕೂಲಕ್ಕೊಬ್ಬಣ್ಣ, ಅಮ್ಮಾವ್ರ ಗಂಡ, ಸತ್ತವನ ಸಂತಾಪ, ನಂಕಂಪ್ನಿ ಇತ್ಯಾದಿಗಳು. ಕೈಲಾಸಂರ ಜನಪ್ರಿಯ ಹಾಡುಗಳೆಂದರೆ: ತಿಪ್ಪಾರ್‍ಹಳ್ಳಿ, ಕೋಳಿಕೆ ರಂಗಾ, ನಂಜೀನನ್ ಅಪರಂಜೀ, ಕಾಶಿಗೆ ಹೋದ ನಂಭಾವ, ಬೋರನ ಭಾರ, ಅರಿವು ಇತ್ಯಾದಿಗಳು. ೧೯೪೫ರಲ್ಲಿ ಮದ್ರಾಸಿನಲ್ಲಿ ನಡೆದ ೨೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು. ಅವರು ನಿಧನ ಹೊಂದಿದ್ದು ೧೯೪೬ರ ನವಂಬರ್ ೨೩ರಂದು.

0 comments: