Friday, May 30, 2008

"ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ

ಬೆಂಗಳೂರು, ಮೇ 30 : ರೈತ ಮತ್ತು ಭಗವಂತನ ಹೆಸರಿನಲ್ಲಿ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪನವರು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಬಿಜೆಪಿ ರಾಷ್ಟ್ರೀಯ ಮುಖಂಡರು, ಭಾರೀ ಜನಸ್ತೋಮದ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಿದರು.

"ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ ಎಂಬ ಹೆಸರಿನವನಾದ ನಾನು ವಿಧಿದ್ವಾರಾ ಸ್ಥಾಪಿತ ಸಂವಿಧಾನದಲ್ಲಿ ಶ್ರದ್ಧೆಯುಳ್ಳವನಾಗಿಯೂ, ಸತ್ಯ-ನಿಷ್ಠೆಯಿಂದಲೂ, ಯಾವುದೇ ರಾಗ ದ್ವೇಷಗಳಿಗೆ ಅವಕಾಶವಾಗದಂತೆ ಕಾರ್ಯ ನಿರ್ವಹಿಸುತ್ತೇನೆಂದು ರೈತರು ಮತ್ತು ಭಗವಂತ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ" ಎಂದು ಪ್ರಮಾಣ ವಚನ ಸ್ವೀಕರಿಸಿದರು. ಬಿಎಸ್‌ವೈ ಪ್ರಮಾಣ ಸ್ವೀಕರಿಸಿದಾಗ ನಿಗದಿಯಾಗಿದ್ದ 1.50ರ ಮುಹೂರ್ತ ಮೀರಿಹೋಗಿತ್ತು ಯಡಿಯೂರಪ್ಪನವರ ಜೊತೆ ಎಂಎಲ್‌ಸಿ ಜನಾರ್ಧನ ರೆಡ್ಡಿ ಮತ್ತು ಐವರು ಪಕ್ಷೇತರರು ಸೇರಿದಂತೆ 29 ಜನರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀರಕರಿಸಿದರು.

ನವವಧುವಿನಂತೆ ಸಿಂಗಾರಗೊಂಡಿರುವ ವಿಧಾನಸೌಧದ ಮುಂಭಾಗದಲ್ಲಿ ನಿರ್ಮಿಸಲಾಗಿರುವ ಭವ್ಯವಾದ ವೇದಿಕೆಯಲ್ಲಿ ಪಕ್ಷದ ಹಿರಿಯ ಮುಖಂಡರು, ನಾಡಿನ ವಿವಿಧ ಮಠಗಳ ಮಠಾಧೀಶರು, ಹಿತೈಷಿಗಳು, ಕಾರ್ಯಕರ್ತರು ಹಾಗೂ ಬೆಂಬಲಿಗರ ಅಪಾರ ಜನಸ್ತೋಮ ನೆರೆದಿತ್ತು. ರಾಜ್ಯಪಾಲ ರಾಮೇಶ್ವರ ಠಾಕೂರ್ ಪ್ರತಿಜ್ಞಾ ವಿಧಿಯ ಗೌಪ್ಯತೆಯನ್ನು ಬೋಧಿಸಿದರು. ಯಾವುದೇ ವಿಘ್ನಗಳಿಲ್ಲದೇ ಪ್ರಮಾಣ ವಚನ ಕಾರ್ಯಕ್ರಮ ಸಾಂಗೋಪಾಂಗವಾಗಿ ವಿಜೃಂಭಣೆಯಿಂದ ಜರುಗಿತು.

ಭಾರತೀಯ ಜನತಾ ಪಕ್ಷಕ್ಕೆ ಇದು ಐತಿಹಾಸಿಕ ದಿನ. ದಕ್ಷಿಣ ಭಾರತದಲ್ಲಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬೇಕೆನ್ನುವ ದಶಕಗಳ ಕನಸು ನನಸಾಗಿದೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ವಿಧಾನಸೌಧದ ಮೂರನೇ ಮಹಡಿಯಲ್ಲಿ ಬರೀ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳದೇ ಕಾರುಬಾರಾಗಿತ್ತು. ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಇಂದು ಅಧಿಕಾರದ ಹೆಬ್ಬಾಗಿಲಿಗೆ ತಂದು ನಿಲ್ಲಿಸಿದ ಕೀರ್ತಿಗೆ ಬಾಜನರಾಗಿರುವ ಯಡಿಯೂರಪ್ಪ, ಇಂದು ರಾಜ್ಯದ ಅತ್ಯುನ್ನತ ಪದವಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

29 ಸಂಪುಟ ಸಚಿವರು : ಕೆ.ಎಸ್.ಈಶ್ವರಪ್ಪ, ಗೋವಿಂದ ಕಾರಜೋಳ ,ವಿ.ಎಸ್.ಆಚಾರ್ಯ, ಮಮ್ತಾಜ್ ಅಲೀಖಾನ್, ರಾಮಚಂದ್ರಗೌಡ, ಸಿ.ಎಂ.ಉದಾಸಿ, ಆರ್. ಅಶೋಕ್, ಎಸ್.ಎ.ರವಿಂದ್ರನಾಥ್, ಕೆ.ಜನಾರ್ಧನ ರೆಡ್ಡಿ, ಬಿ.ಎನ್.ಬಚ್ಚೇಗೌಡ, ಕೆ.ಕರುಣಾಕರರೆಡ್ಡಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಬಸವರಾಜ ಬೊಮ್ಮಾಯಿ, ಬಿ.ಶ್ರೀರಾಮುಲು, ಶೋಭಾ ಕರಂದ್ಲಾಜೆ, ರೇವೂ ನಾಯಕ್ ಬೆಳಮಗಿ, ಕೃಷ್ಣ ಪಾಲೇಮಾರ್, ಎಸ್.ಸುರೇಶ್ ಕುಮಾರ್, ವೆಂಕಟರಮಣಪ್ಪ(ಪಕ್ಷೇತರ), ಅರವಿಂದ ಲಿಂಬಾವಳಿ, ಕೃಷ್ಣಯ್ಯ ಶೆಟ್ಟಿ, ಡಿ.ಸುಧಾಕರ್(ಪಕ್ಷೇತರ), ನರೇಂದ್ರಸ್ವಾಮಿ(ಪಕ್ಷೇತರ), ಎಚ್.ಹಾಲಪ್ಪ, ಲಕ್ಷ್ಮಣ ಸವದಿ, ಮುರುಗೇಶ್ ನಿರಾಣಿ, ಗೂಳಿಹಟ್ಟಿ ಚಂದ್ರಶೇಖರ್ (ಪಕ್ಷೇತರ), ಎಸ್.ಕೆ.ಬೆಳ್ಳುಬ್ಬಿ, ಶಿವರಾಜ್ ತಂಗಡಗಿ(ಪಕ್ಷೇತರ). ಎಲ್ಲರೂ ಸಂಪುಟ ದರ್ಜೆ ಸಚಿವರು.

ಐವರು ಪಕ್ಷೇತರರು, ಎಂಎಲ್‌ಸಿಗಳಾದ ವಿ.ಎಸ್. ಆಚಾರ್ಯ, ರಾಮಚಂದ್ರೇಗೌಡ ಮತ್ತು ಜನಾರ್ಧನ ರೆಡ್ಡಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ಸ್ವೀಕರಿಸಿದರು. ಜಗದೀಶ್ ಶೆಟ್ಟರ್, ಶಂಕರಲಿಂಗೇಗೌಡ ಅವರು ಪ್ರಮಾಣ ಸ್ವೀಕರಿಸದಿರುವುದು ಅನೇಕರ ಹುಬ್ಬೇರುವಂತೆ ಮಾಡಿದೆ. ಮೂವರು ಮೂವರು ಒಟ್ಟಿಗೇ ಪ್ರಮಾಣ ಸ್ವೀಕರಿಸಿದ್ದರಿಂದ ಅವರ ಮಾತುಗಳಲ್ಲಿ ತಾಳಮೇಳ ಕಾಣದೇ ಎಲ್ಲವೂ ಕಲಸುಮೇಲೋಗರವಾಗಿತ್ತು. ಪ್ರಮಾಣವಚನ ಸ್ವೀಕರಿಸಿದ ಎಲ್ಲರೂ ಯಡಿಯೂರಪ್ಪನವರ ಕಾಲಿಗೆರಗಿ ಅವರ ಆಶೀರ್ವಾದ ಪಡೆದದ್ದು ವಿಶೇಷವಾಗಿತ್ತು. ಮತ್ತೊಬ್ಬ ಪಕ್ಷೇತರನಾದ ವರ್ತೂರು ಪ್ರಕಾಶ್ ಮೊದಲ ಹಂತದಲ್ಲಿ ಸಂಪುಟದಲ್ಲಿ ಸ್ಥಾನ ಪಡೆದಿಲ್ಲ. ಇಂದು ಸಂಪುಟ ದರ್ಜೆ ಸಭೆ ನಡೆಯಲಿದ್ದು, ನಂತರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಪ್ರಮುಖರ ಉಪಸ್ಥಿತಿ : ಭಾರತೀಯ ಜನತಾ ಪಕ್ಷದ ಪಕ್ಷದ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ, ರಾಷ್ಟ್ರೀಯ ಘಟಕದ ಅಧ್ಯಕ್ಷ ರಾಜನಾಥ್ ಸಿಂಗ್, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಪಾಟೀಲ್, ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ , ಕೇಂದ್ರದ ಮಾಜಿ ಸಚಿವ ಎನ್‌ಡಿಎ ಸಂಚಾಲಕ ಜಾರ್ಜ್ ಪರ್ನಾಂಡಿಸ್, ಗೋಪಿನಾಥ್ ಮುಂಡೆ, ವೆಂಕಯ್ಯ ನಾಯ್ಡು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಈ ಐತಿಹಾಸಿಕ ಗಳಿಗೆಗೆ ಸಾಕ್ಷಿಯಾದರು.

ಪ್ರತಿಪಕ್ಷದನಾಯಕ ಮಲ್ಲಿಕಾರ್ಜುನ ಖರ್ಗೆ, ಪಿ.ಜಿ.ಆರ್. ಸಿಂಧ್ಯಾ, ಆರ್.ವಿ. ದೇಶಪಾಂಡೆ ಹಾಗೂ ಎಂ.ಪಿ. ಪ್ರಕಾಶ್ ಮಾತ್ರ ಹಾಜರಿದ್ದು, ವಿರೋಧಪಕ್ಷಕ್ಕೆ ಮೀಸಲಾಗಿದ್ದ ಆಸನಗಳು ಖಾಲಿಹೊಡೆಯುತ್ತಿತ್ತು.

ಅಲ್ಲದೇ ನಾಡಿನ ವಿವಿಧ ಮಠಾಧೀಶರು ಕಾರ್ಯಕ್ರಮದಲ್ಲಿ ಉಪಸ್ಥಿತಿರಿದ್ದರು.ವಿಧಾನಸೌಧ ಸುತ್ತಮುತ್ತಲಿನ ಪ್ರದೇಶ ಕೇಸರಿ ದ್ವಜಗಳಿಂದ ತುಂಬಿ ಹೋಗಿದ್ದು ಸಹಸ್ರಾರು ಸಂಖ್ಯೆಯಲ್ಲಿ ಬಂದಿರುವ ಕಾರ್ಯಕರ್ತರು ಹರ್ಷೋದ್ಘಾರ, ಜೈಕಾರ ಮುಗಿಲು ಮುಟ್ಟಿತ್ತು. ಸುಮಾರು 40 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಜನಜಾತ್ರೆ ವಿಧಾನಸೌಧದೆದುರು ಜಮಾಯಿಸಿತ್ತು. ಎದುರಿಗಿನ ಉಚ್ಚ ನ್ಯಾಯಾಲಯ, ವಿಧಾನಸೌಧದ ಆವರಣದಲ್ಲಿದ್ದ ಗಿಡಮರಗಳ ಮೇಲೂ ಜನ ಜಮಾಯಿಸಿ ಈ ಸಮಾರಂಭವನ್ನು ವೀಕ್ಷಿಸಿದರು. ವೀರಗಾಸೆ, ಡೊಳ್ಳು ಕುಣಿತ, ಪುರವಂತರು, ಜಾನಪದ ಹಾಡುಗಾರರು ತಮ್ಮ ಹಾಡಿನ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ರಂಗು ನೀಡಿದರು.

0 comments: