Wednesday, April 30, 2008


I love to hear the language of holalkere, and all the regional languages.

Sunday, April 27, 2008

ಎಮ್. ವಿ. ಕಾಮತ್- ಒಬ್ಬ ಸಮರ್ಥ ಪತ್ರಕರ್ತ !

ಹದಿವಯದ ಹುಡುಗನ ಜೀವನದಲ್ಲಿಯ ಒಂದು ಮಹತ್ವದ ಸಂಸ್ಕಾರವೆಂದರೆ `ಯಜ್ಞೋಪವೀತ' ಧಾರಣ. ಮಾಧವರ ಮುಂಜಿ ಆದಾಗ ಕುಟುಂಬದ ಸದಸ್ಯರೆಲ್ಲ ನೆರೆದಿದ್ದರು. ವೈದಿಕ ಸಂಪ್ರದಾಯದ ಪ್ರಕಾರ ಈ ಸಂಸ್ಕಾರದೊಂದಿಗೆ ವಟುವಿಗೆ ದ್ವಿಜತ್ವ ಪ್ರಾಪ್ತವಾಗುತ್ತದೆ. ಈ ವಯಕ್ಕೆ ಹಿಂದಿನ ಕಾಲದಲ್ಲಿ ಬಾಲಕನು ಗುರುಕುಲ ಸೇರುತ್ತಿದ್ದನು. ಆಗ ಗುರುವೇ ಅವನ ಎರಡನೆಯ ತಾಯಿಯಾಗಿ ವಿದ್ಯೆಯನ್ನು ನೀಡಿ ಪಾಲನೆ ಮಾಡುತ್ತಿದ್ದ. ಬಾಲಕ ಮರುಹುಟ್ಟು ಪಡೆಯುವುದರಿಂದ `ದ್ವಿಜ' ಎಂದು ಕರೆಯಲ್ಪಡುತ್ತಿದ್ದ. ಕಾಮತರು ಈ ಸಂಸ್ಕಾರ ಪಡೆದ ಮೇಲೆ ಪ್ರತಿದಿನ ಸಂಧ್ಯಾವಂದನೆ ಮಾಡಲು ಪ್ರಾರಂಭಿಸಿದರಂತೆ. ದಿನಕ್ಕೆ ಮೂರು ಸಲ ಸಂಧ್ಯಾವಂದನೆ ಮಾಡಬೇಕು. ಪ್ರಾತಃಸಂಧ್ಯಾ, ಮಧ್ಯಾಹ್ನ ಸಂಧ್ಯಾ ಹಾಗೂ ಸಾಯಂಸಂಧ್ಯಾ. `ಶುಕ್ಲಾಂಬರಧರಂ ವಿಷ್ಣುಂ ಶಶಿವರರ್ಣಂ ಚತುರ್‌ಭುಜಂ | ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇ' ಮಂತ್ರದಿಂದ ಪ್ರಾರಂಭ.

ಕಾಮತರು ತಾವು ಬಾಲ್ಯದಲ್ಲಿ ಪಠಿಸುತ್ತಿದ್ದ ಹಲವಾರು ಮಂತ್ರಗಳನ್ನು ಉದ್ಧರಿಸಿ ಅವುಗಳ ಇಂಗ್ಲಿಷ್ ಅನುವಾದ ಕೊಡುತ್ತಾರೆ. `ಕಾಲೇ ವರ್ಷತು ಪರ್ಜನ್ಯ ಪೃಥಿವೀ ಸಸ್ಯಶಾಲಿನೀ | ದೇಶೋಯಂ ಕ್ಷೋಭರಹಿತಾ ಸಜ್ಜನಾ ಸಂತು ನಿರ್ಭಯಾ'. ಎಂತಹ ಉದಾತ್ತ ವಿಚಾರ ಇಲ್ಲಿ ಅಡಗಿದೆ ಎನ್ನುತ್ತಾರೆ. `ಸರ್ವೇಪಿ ಸುಖಿನಸ್ಸಂತು ಸರ್ವೇ ಸಂತು ನಿರಾಮಯಾಃ | ಸರ್ವೇ ಭದ್ರಾಣಿ ಪಶ್ಯಂತು ಮಾಕಶ್ಚಿತ್ ದುಃಖಾಮಾಪ್ನುಯಾತ್'. ಇವುಗಳ ಜೊತೆಗೆ ಗಾಯತ್ರೀ ಮಂತ್ರದ ಪಠನ.

ಮುಂಜಾನೆ ಹೋಮ್‌ವರ್ಕನ ಗಡಬಡಿ, ಮಧ್ಯಾಹ್ನ ಬಿಡುವಿಲ್ಲದ ಕೆಲಸ, ಸಂಜೆ ಆಟದಲ್ಲಿ ಆಸಕ್ತಿ, ಇವುಗಳಿಂದಾಗಿ ತ್ರಿಕಾಲ ಸಂಧ್ಯಾ ಸಾಧಿಸುತ್ತಿರಲಿಲ್ಲ ಎನ್ನುತ್ತಾರೆ. ಅಜ್ಜಿಯ ಲಕ್ಷ್ಯ ಇವರ ಸಂಧ್ಯಾವಂದನೆಯ ಕಡೆಗೆ ಇರುತ್ತಿದ್ದರಿಂದ ಪೂರ್ತಿ ತಪ್ಪಿಸುವುದು ಸುಲಭವಾಗಿರಲಿಲ್ಲ. ಉಡುಪಿ ಬಿಟ್ಟು ಕಾಲೇಜು ಶಿಕ್ಷಣಕ್ಕಾಗಿ ಮಂಗಳೂರು ಸೇರಿದ ಮೇಲೆ ಈ ಸಂಧ್ಯಾವಂದನೆ ನಿಂತಿತು ಎನ್ನುತ್ತಾರೆ.

ಇವರಿಗೆ ಓದುವ ಗೀಳು ಬಾಲ್ಯದಿಂದಲೇ ಪ್ರಾರಂಭವಾಗಿತ್ತು. ಉಡುಪಿಯಲ್ಲಿ ಮಧ್ವ ಸಿದ್ಧಾಂತ ಗ್ರಂಥ ಮಾಲೆಯವರು ನಿಯಮಿತವಾಗಿ ಪುಸ್ತಕ ಪ್ರಕಟಿಸುತ್ತಿದ್ದರು. ತಂದೆ ಪುಸ್ತಕ ತರಿಸುತ್ತಿದ್ದರು. ಇವರು ಓದುತ್ತಿದ್ದರು. `ಇದರಿಂದ ನನ್ನ ತಲೆಯಲ್ಲಿ ಅಧ್ಯಾತ್ಮಿಕತೆ ಜಾಗ್ರತವಾಯಿತೋ ಇಲ್ಲವೋ ಗೊತ್ತಿಲ್ಲ, ಆದರೆ ನನ್ನ ತಲೆ ವಿಚಾರಗಳಿಂದ ತುಂಬಿತ್ತು.' ಎನ್ನುತ್ತಾರೆ. ಬಾಲ್ಯದ ದಿನಗಳು ಕಳೆದವು ಆದರೆ `ಹಳೆಯ ಪರಿಚಿತ ಮುಖಗಳನ್ನು' (Old familiar faces) ಅವರಿಗೆ ಮರೆಯಲು ಸಾಧ್ಯವಾಗಲಿಲ್ಲ.

ಕಾಮತರು ತಮ್ಮ ಎಳಮೆಯಲ್ಲಿ ನಡೆದ ಅಕ್ಷರಾಭ್ಯಾಸದ ಕಾರ್ಯಕ್ರಮ ನೆನೆಯುತ್ತಾರೆ. ಬೆಳ್ಳಿಯ ತಟ್ಟೆಯಲ್ಲಿ ಅಕ್ಕಿ ಹಾಕಿ ಅದರಲ್ಲಿ ದೇವನಾಗರಿ ಲಿಪಿಯಲ್ಲಿ `ಓಂ' ಬರೆಸಿದರಂತೆ. ತಂದೆತಾಯಿ ಮತ್ತೆ ಸಂಬಂಧಿಕರಿಗೆಲ್ಲ ಅದು ಹರ್ಷ ತಂದ ಸಂಭ್ರಮದ ದಿನ. ಶಾಲೆಯಲ್ಲಿ `ಎ, ಬಿ, ಸಿ, ಡಿ...' ಬರೆಯಲು ಕಲಿತರು. ಇವರು ಸೇರಿದ್ದು ಕಾನ್ವೆಂಟ್ ಶಾಲೆ. `ಜ್ಯಾಕ್ ಅಂಡ್ ಜಿಲ್..', `ಬಾ ಬಾ ಬ್ಲ್ಯಾಕ್ ಶೀಪ್....' ಪದ್ಯ ಸಾಭಿನಯವಾಗಿ ಹಾಡಲು ಕಲಿಸಿದ ದಿನ ನೆನೆಯುತ್ತಾರೆ. ಕನ್ನಡ ಲಿಪಿಯನ್ನು ಮನೆಯಲ್ಲಿ ಕಲಿತರಂತೆ. ಇಂಗ್ಲೀಷು ಬಲ್ಲವನೇ ಕಲಿತವ ಎಂದು ಭಾವಿಸಿದ ಕಾಲ ಅದಾಗಿತ್ತು. ಕಿಂಡರ್ಗಾರ್ಟನ್, ಕಾನ್ವೆಂಟ್ ಮುಗಿಸಿ ಹೈಸ್ಕೂಲಿನ ನಾಲ್ಕನೆಯ ತರಗತಿ ಸೇರಿದಾಗ ಅಲ್ಲಿ ಶಿಕ್ಷಣ ಕನ್ನಡ ಮಾಧ್ಯಮದಲ್ಲಿತ್ತು. ಇವರಿಗೆ ಕನ್ನಡ ಮಾಧ್ಯಮದಲ್ಲಿ ಕಲಿಯುವುದು ಕಷ್ಟಕರವಾಯ್ತು. ನಂತರ ಇವರು ಕ್ರಿಶ್ಚನ್ ಹೈಸ್ಕೂಲ್ ಸೇರಿದರು. ಅಲ್ಲಿ ಬೈಬಲ್ ಕ್ಲಾಸು ಕಡ್ಡಾಯವಾಗಿತ್ತು. ಬೈಬಲ್ ಕತೆಗಳನ್ನು ಹೇಳಲಾಗುತ್ತಿತ್ತು. ಕನ್ನಡ ಭಾಷೆಯಲ್ಲಿ ಬೈಬಲ್ ಕತೆ ಕೇಳಲು ಇವರಿಗೆ ಇಷ್ಟವಾಗುತ್ತಿರಲಿಲ್ಲ. ನಂತರ ಇವರು ಕಿಂಗ್ ಜೇಮ್ಸರ ಬೈಬಲ್ ಬಹಳ ಪ್ರೀತಿಯಿಂದ ಓದಿದರಂತೆ. ಶಾಲೆಯಲ್ಲಿ ಇವರಿಗೆ `ನ್ಯೂ ಟೆಸ್ಟಮೆಂಟ್' ಮಾತ್ರ ಕಲಿಸುತ್ತಿದ್ದರು. ಇವರಿಗೆ `ಓಲ್ಡ ಟೆಸ್ಟಮೆಂಟ್'ನ ಕತೆಗಳು ಬಹಳ ರುಚಿಸಿದವು. ಉದಾಹರಣೆಗೆ `ನೋವಾಜ್ ಆರ್ಕ' ಕತೆಯ ಬಗ್ಗೆ ಬರೆಯುತ್ತಾರೆ.

ಕ್ರಿಶ್ಚನ್ ಹೈಸ್ಕೂಲಿನಲ್ಲಿ ಇವರು ಕ್ರಿಕೆಟ್ ಆಡಲು ಕಲಿತರು. ಆ ಶಾಲೆಗೆ ನೂರು ವರ್ಷ ಆದಾಗ ಇವರನ್ನು ಅತಿಥಿಯಾಗಿ ಶಾಲೆಯ ಶತಮಾನೋತ್ಸವ ಸಮಿತಿಯವರು ಆಮಂತ್ರಿಸಿದ್ದರಂತೆ. ತಾವು 1929ರಲ್ಲಿ ಶಾಲೆಯ ವಿದ್ಯಾರ್ಥಿಯಾಗಿದ್ದಾಗಿನ ಅಪೂರ್ವ ನೆನಪು ದಾಖಲಿಸುತ್ತಾರೆ. ಅವರು ಶಾಲೆಯಲ್ಲಿದ್ದಾಗಿನ `ಅಟೆಂಡೆನ್ಸ್ ರಜಿಸ್ಟರ್' ನೋಡಲು ಸಿಕ್ಕಿತ್ತು. ಅದರಲ್ಲಿ ತಮ್ಮ ಹೆಸರನ್ನು ನೋಡಿ ಹರ್ಷಪುಲಕಿತರಾದರು.

ಎಂಟನೆಯ ಕ್ಲಾಸಿನಿಂದ ಹನ್ನೊಂದನೆಯ ಕ್ಲಾಸಿನ ವರೆಗೆ ಇವರ ಶಿಕ್ಷಣ ಬೋರ್ಡ್ ಹೈಸ್ಕೂಲಿನಲ್ಲಾಯಿತಂತೆ. (ಆ ಕಾಲದಲ್ಲಿ ಹನ್ನೊಂದನೆಯ ಕ್ಲಾಸು ಮೆಟ್ರಿಕ್ ಆಗಿತ್ತು, ಈಗಿನ ಎಸ್.ಎಸ್.ಸಿ. ಹತ್ತನೆಯ ಕ್ಲಾಸು). ಕ್ರಿಶ್ಚನ್‌ರಲ್ಲಿ ರೋಮನ್ ಕೆಥೊಲಿಕ್ ಹಾಗೂ ಪ್ರೊಟೆಸ್ಟಂಟ್ ಎಂಬ ಪಂಗಡಗಳಿವೆ. ಅವರಲ್ಲಿ ಇದ್ದ ವೈಷಮ್ಯವನ್ನು ಲೇಖಕರು ಮೊದಲಿಗೆ ಕಂಡರು. ಕೆಥೊಲಿಕ್ ಮಕ್ಕಳು ಪ್ರೊಟೆಸ್ಟಂಟ್ ಚರ್ಚುಗಳಲ್ಲಿ, ಪ್ರೊಟೆಸ್ಟಂಟ್ ಮಕ್ಕಳು ಕೆಥೊಲಿಕ್ ಚರ್ಚುಗಳಲ್ಲಿ ಆಟವಾಡುವುದು ನಿಷಿದ್ಧವಾಗಿತ್ತು. ಹಿಂದುಗಳಲ್ಲಿ ಬಡವರು, ದಲಿತರು ಆದವರು ಮತಾಂತರ ಹೊಂದುತ್ತಿರುವ ಕಾಲವದು. ಕ್ರಿಶ್ಚನ್ ವಿದ್ಯಾರ್ಥಿಗಳೂ ಬಡವರಾಗಿರುವುದನ್ನು ಕಂಡು ಇವರಿಗೆ ಅಚ್ಚರಿಯಾಗಿತ್ತು. ಇವರ ಸಹಪಾಠಿಯೊಬ್ಬ ಚಾರ್ಲಸ್ ಎಂಬ ಹುಡುಗ ವರ್ಷವಿಡೀ ಒಂದೇ ಶರ್ಟು, ಒಂದೇ ಜಾಕೀಟು ಹಾಕಿಕೊಳ್ಳುತ್ತಿದ್ದನಂತೆ.

ಮಳೆಯಿರಲಿ, ಚಳಿಯಿರಲಿ, ಬಿಸಿಲಿರಲಿ ಅವನು ಅದೇ ಜಾಕೀಟು ಧರಿಸುತ್ತಿದ್ದ. ಒಮ್ಮೆ ಚಾರ್ಲಸ್ ಕ್ರಿಕೆಟ್ ಆಡುವಾಗ ಜಾಕೀಟು ಹಾಕಿಕೊಂಡೆ ಕಷ್ಟವಾದರೂ ಬಾಲಿಂಗ್ ಮಾಡುತ್ತಿದ್ದ. ಮಿತ್ರರೆಲ್ಲ ಅವನಿಗೆ ಜಾಕೀಟು ತೆಗೆದು ಬಾಲ್ ಮಾಡಲು ಹೇಳಿದರೂ ಅವನು ಕೇಳದಿರಲು ಮಿತ್ರರು ಅವನ ಜಾಕೀಟನ್ನು ಬಲವಂತವಾಗಿ ತೆಗೆದುಬಿಟ್ಟರಂತೆ. ಅವನ ಒಂದೇ ಶರ್ಟು ಹರಿದಿತ್ತು, ಹಿಂಭಾದ ಪೂರ್ತಿ ಹರಿದು ಬೆನ್ನು ಕಾಣುತ್ತಿತ್ತು. ಆ ಹುಡುಗ ಅಳತೊಡಗಿದ. ಮಿತ್ರರಿಗೆ ಅವನ ಬಡತನ ಕಂಡು ಕಣ್ಣಲ್ಲಿ ನೀರು ಬಂತಂತೆ.

ಇತರ ಸಹಪಾಠಿಗಳನ್ನು ನೆನೆದಾಗ ಕಾಮತರು ತಮ್ಮನು ತಾವೇ ಸುದೈವಿ ಎಂದು ಕರೆದುಕೊಳ್ಳುತ್ತಾರೆ. ಇವರ ತಂದೆ ಉಡುಪಿ ತಾಲೂಕ ಬೋರ್ಡಿನ ಅಧ್ಯಕ್ಷರಾಗಿದ್ದರು. ಒಂದು ಲೈಬ್ರರಿ ಸ್ಥಾಪಿಸಿದ್ದರು. ಮದ್ರಾಸಿನಿಂದ `ದಿ ಹಿಂದೂ' ಪತ್ರಿಕೆ ತರಿಸುತ್ತಿದ್ದರು. ಕಾಮತರು ಇಂಗ್ಲಿಷ್ ಪತ್ರಿಕೆಯಲ್ಲದೆ ಅಂದಿನ ಕನ್ನಡ ವಾರ ಪತ್ರಿಕೆಗಳಾಗಿದ್ದ `ರಾಷ್ಟ್ರ ಬಂಧು', `ಸ್ವದೇಶಾಭಿಮಾನಿ', `ನವಭಾರತ'ಗಳನ್ನು ಆಸಕ್ತಿಯಿಂದ ಓದುತ್ತಿದ್ದರು. ವಿದ್ಯಾರ್ಥಿಗಳಲ್ಲಿ ಸಿರಿವಂತ ಬಡವ ಎಂಬ ಭೇದವಿರಲಿಲ್ಲ. ಅಭ್ಯಾಸ ಹಾಗೂ ಆಟದಲ್ಲಿ ಮುಂದಾದವರಿಗೆ ಹೆಚ್ಚಿನ ಮರ್ಯಾದೆ ಇತ್ತು. ಕಾಮತರು ಗಣಿತ ಹಾಗೂ ಕನ್ನಡ ವಿಷಯಗಳಲ್ಲಿ `ವೀಕ್'(ಅಶಕ್ತ)ರಾಗಿದ್ದರು. ಆದರೆ ಇಂಗ್ಲೀಷ್, ಭೂಗೋಲ, ಇತಿಹಾಸ ಮತ್ತು ವಿಜ್ಞಾನ ವಿಷಯಲ್ಲಿ ಹೆಚ್ಚಿನ ಪ್ರಗತಿ ತೋರಿ ಕೊರತೆಯನ್ನು ಪೂರೈಸಿಕೊಳ್ಳುತ್ತಿದ್ದರು.

ಇವರು ಕಲಿಯುವಾಗ ಸಂಸ್ಕೃತಕ್ಕೆ `ಮೃತ ಭಾಷೆ' (ಡೆಡ್ ಲ್ಯಾಂಗ್ವೇಜ್) ಎಂಬ ಹಣೆಪಟ್ಟಿ ಹಚ್ಚಿದ್ದರಿಂದ, ಇವರು ಒಂದು ವರ್ಷ ಮಾತ್ರ ಸಂಸ್ಕೃತ ಕಲಿತರಂತೆ. ನಂತರ ತಾವು ಸಂಸ್ಕೃತ ಏಕೆ ಕಲಿಯಲಿಲ್ಲ ಎಂದು ಪಶ್ಯಾತ್ತಾಪ ಪಟ್ಟಿದ್ದಾರೆ.

ಇವರ ಸಹಪಾಠಿಗಳಲ್ಲಿ ಶ್ರೀಮಂತರೂ ಇದ್ದರು. ಕೆ.ಕೆ.ಪೈ ಇವರ ಸಹಪಾಠಿಯಗಿದ್ದರು. ಮುಂದೆ ಇವರು ಸಿಂಡಿಕೇಟ್ ಬ್ಯಾಂಕಿನ ಚೇರಮನ್ನರಾದರು. ಟಿ.ಎ.ಪೈ ಅವರು ಒಂದು ವರ್ಷ ಜ್ಯೂನಿಯರ್ ಆಗಿದ್ದರು. ಮುಂದೆ ಇವರು ಇಂದಿರಾ ಗಾಂಧಿಯವರ ಮಂತ್ರಿಮಂಡಲದಲ್ಲಿ ಕ್ಯಾಬಿನೆಟ್ ರ್‍ಯಾಂಕ್ ಪಡೆದ ಮಂತ್ರಿಯಾದರು. ಇವರ ಹೆಡ್ ಮಾಸ್ಟರರಾಗಿದ್ದ ರೊಕ್ಯು ಫರ್ನಾಂಡಿಸ್ ಎಂಬವರು ವಿಧ್ಯಾರ್ಥಿಗಳಿಗೆ ಐ.ಸಿ.ಎಸ್. ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಪ್ರೋತ್ಸಾಹಿಸುತ್ತಿದ್ದರು. ಸ್ವಾತಂತ್ರ್ಯ ಬಂದ ಮೇಲೆ ಕಾಮತರ ಸೋದರನೋರ್ವ (ಮೋಹನ ಪೈ) ಐ.ಎ.ಎಸ್. ಪರೀಕ್ಷೆ ಪಾಸಾದಾಗ ಶಾಲೆಯಲ್ಲಿ `ಹೀರೋ'ನ ಸನ್ಮಾನ ದೊರೆತಿತ್ತಂತೆ.

ಇವರ ಸಹಪಾಠಿಯ ತಂದೆ ಒಂದು ಸ್ಪೋರ್ಟ್ಸ್ ಶಾಪ್ ಇಟ್ಟಿದ್ದರು. ಅವರು `ನ್ಯಾಶನಲ್ ಜಾಗರ್‌ಫಿಕ್' ಮ್ಯಾಗಜಿನ್ ತರಿಸುತ್ತಿದ್ದರಂತೆ. ಅದನ್ನು ಓದುವ ಲಾಭ ಇವರಿಗೆ ದೊರೆತಿತ್ತು. ಇನ್ನೂ ಶಾಲೆಯಲ್ಲಿ ಕಲಿಯುವಾಗಲೇ ಒಂದು ಪ್ರೈವೇಟ್ ಲೈಬ್ರರಿಯಿಂದ ಕಾಮತರು ಸೆಕ್ಸ್‌ಟನ್ ಬ್ಲೇಕ್, ಎಡ್‌ಗರ್ ವ್ಯಾಲೇಸ್, ಆರ್ಥರ್ ಕೊನನ್ ಡಾಯಿಲ್ ಮುಂತಾದವರ ಹೆಚ್ಚಿನ ಕಾದಂಬರಿಗಳನ್ನು ಓದಿ ಮುಗಿಸಿದ್ದರಂತೆ. ಸ್ಕೂಲ್ ಲೈಬ್ರರಿಯಿಂದ ತಂದ ಜೇನ್ ಆಸ್ಟಿನ್, ಥ್ಯಾಕರೆ, ಚಾರ್ಲಸ್ ಡಿಕನ್ಸ್ ಮುಂತಾದವರ ಕಾದಂಬರಿಗಳನ್ನು ಓದಿದ್ದರಂತೆ. ಡಿಕನ್ಸ್‌ರ `ಆಲಿವ್ಹರ್ ಟ್ವಿಸ್ಟ್' ಕಾದಂಬರಿಯನ್ನು ವಿವರವಾಗಿ ಉದ್ಧರಿಸಲು ಶಕ್ತರಾಗಿದ್ದರು. ಆಗ ಗದ್ಯ ಮತ್ತು ಪದ್ಯವೆಂಬ ಭೇದವಿಲ್ಲದಲೇ ಓದಿ ಆನಂದಿಸುತ್ತಿದ್ದರು. ಅಂತರ್‌ರಾಷ್ಟೀಯ ಖ್ಯಾತಿವೆತ್ತ ಚಿತ್ರ ಕಲಾವಿದ ಕೆ.ಕೆ.ಹೆಬ್ಬಾರರು ಇವರಿಗಿಂತ 9 ವರ್ಷ ದೊಡ್ಡವರಾಗಿದ್ದರು. ಶಾಲೆಯ ಆವರಣದಲ್ಲಿ ಚಿತ್ರಬಿಡಿಸುತ್ತ ಕುಳಿತುಕೊಂಡಿರುವ ಹೆಬ್ಬಾರರ ಚಿತ್ರ ಹಚ್ಚಗೆ ಕಾಮತರ ನೆನಪಿನಲ್ಲಿದೆ. ಮುಂದೆ 1960ರ ದಶಕದಲ್ಲಿ ಹೆಬ್ಬಾರರ ಒಂದು ಪ್ರದರ್ಶನದಲ್ಲಿ ಅವರ ಒಂದು ಚಿತ್ರವನ್ನು ಇವರ ಹೆಂಡತಿ ಬಹುವಾಗಿ ಮೆಚ್ಚಿ ಕೊಂಡುಕೊಂಡ ಘಟನೆಯನ್ನು ನೆನೆಯುತ್ತಾರೆ.

ಬಾಲ್ಯದ ಸ್ಮೃತಿಗಳಲ್ಲಿ ನಾಯಿಯ ಚಿತ್ರವಿರುವ `ಹಿಸ್ ಮಾಸ್ಟರ್ಸ್ ವಾಯಿಸ್' ಕಂಪನಿಯ ಗ್ರಾಮೋಫೋನ್ ರೆಕಾರ್ಡ ಕೇಳಿದ್ದು ನೆನೆಯುತ್ತಾರೆ. ಕ್ರಿಕೆಟ್ ಜಗದ ಅಂದಿನ ತಾರೆಗಳಾದ ಬ್ರ್ಯಾಡ್‌ಮನ್, ಸಿ.ಕೆ.ನಾಯಡು ಬಗ್ಗೆ ಬರೆಯುತ್ತಾರೆ. 1928 ರಲ್ಲಿ ಮೂಕಿಚಿತ್ರ ನೋಡಿದ್ದರು. ಚಿತ್ರದ ಹೆಸರು `ಸ್ಟ್ರೀಟ್ ಗರ್ಲ್'(ಬೀದಿಯ ಹುಡುಗಿ). ಅದೊಂದು ಮ್ಯಾಟಿನಿ ಶೋ. ಸಿನೇಮಾ ಹಾಲ್‌ನಲ್ಲಿ ಚಿತ್ರ ಶುರು ಆಗುವದಕ್ಕೆ ಮೊದಲು ಬ್ಯಾಂಡು ಬಾರಿಸುತ್ತಿದ್ದರು. ಮೂಕ ಚಿತ್ರದ ಜೊತೆಗ ಇಂಗ್ಲೀಷಿನಲ್ಲಿ ಕ್ಯಾಪ್ಶನ್ ಇರುತ್ತಿದ್ದವು. ನಂತರ ಟಾಕೀ ಚಿತ್ರಗಳು ಬಂದವು. ಅಂದಿನ ತಾರೆಗಳಾದ ಸುಲೋಚನ, ದೇವಿಕಾರಾಣಿ ಅವರ ಬಗ್ಗೆ ಬರೆಯುತ್ತಾರೆ.

1949-50ರಲ್ಲಿ ಇವರು ಮುಂಬೈಯ ಸಂಜೆಪತ್ರಿಕೆ `ಫ್ರೀ ಪ್ರೆಸ್ ಜರ್ನಲ್'ದ ಸಂಪಾದಕರಾದಾಗ ಸಿನೇಮಾ ಪುಟದ ಸಂಪಾದಕರಾದ ಅಜಿತ್ ಮರ್ಚಂಟರಿಗೆ ಹೇಳಿದ್ದರಂತೆ, `ಹಳೆಯ ಸಿನೇಮಾ ತಾರೆಯರ ಬಗ್ಗೆ ಒಂದು ಫೀಚರ್ ಯಾಕೆ ಪ್ರಾರಂಭಿಸಬಾರದು?' ಎಂದು. `ಯಾರಿಂದ ಶುರು ಮಾಡೋಣ' ಎಂದು ಅಜಿತ್ ಕೇಳಿದಾಗ, ಕಾಮತರು ಅಂದರಂತೆ, `ಸುಲೋಚನಾಳಿಂದ ಶುರು ಮಾಡೋಣ' ಎಂದು. ಕಾಮತರು ಹದಿನಾಲ್ಕು ವರ್ಷದ ಹುಡುಗನಾಗಿದ್ದಾಗ ಸುಲೋಚನಾಳ ಸೌಂದರ್ಯಕ್ಕೆ ಮನಸೋತಿದ್ದರಂತೆ, ಅವಳನ್ನು ಪ್ರೀತಿಸತೊಡಗಿದ್ದರಂತೆ. ಅವಳನ್ನು ಸಂದರ್ಶಿಸುವಾಗ ಅಜಿತ್ ಈ ವಿಷಯ ಸುಲೋಚನಾಳಿಗೆ ಹೇಳಿದಾಗ ಅವಳಿಗಾದ ಆನಂದಕ್ಕೆ ಪಾರವಿರಲಿಲ್ಲವಂತೆ. ಅವಳು ಇವರನ್ನು ಚಹಾಕ್ಕೆ ಕರೆದಳು. ಅವಳ ವಾಸಸ್ಥಾನವು ಕೆಂಪ್ಸ್ ಕಾರ್ನರಿನ ಒಂದು ಹಾಳುಬಿದ್ದ ಮನೆ. ಅವಳ ಸ್ಥಿತಿ ಕಂಡು ಕಾಮತರು ಮಮ್ಮಲ ಮರುಗಿದರು.

ಬಾಲ್ಯದಲ್ಲಿ ಇವರ ಮೇಲೆ ಬಹಳ ಪ್ರಭಾವ ಬೀರಿದ ವ್ಯಕ್ತಿ ಎಂದರೆ ವಿವೇಕಾನಂದರು. ವಿವೇಕಾನಂದ, ರಾಮಕೃಷ್ಣ ಪರಮಹಂಸ, ಮಾತೆ ಶಾರದಾದೇವಿ- ಇವರುಗಳ ಬೃಹತ್ ಭಾವಚಿತ್ರಗಳು ಇವರ ಮನೆಯಲ್ಲಿದ್ದವಂತೆ. ಕಠೋಪನಿಷತ್ತಿನ ವಾಕ್ಯ, `ಉತ್ತಿಷ್ಠ, ಜಾಗ್ರತ, ಪ್ರಾಪ್ಯವರಾನಿಬೋಧತ' (ಎದ್ದೇಳು, ಎಚ್ಚರರಾಗು, ಗುರಿ ತಲುಪುವ ವರೆಗೆ ನಿಲ್ಲಬೇಡ.) (Arise, Awake, and stop not till the

Friday, April 25, 2008

ಡಾ. ಅಚ್ಯುತ ಸಮಂತಾ.

ಇಲ್ಲೊಬ್ಬ ಸುಬ್ಭಣ್ಣ, ಅಲ್ಲೊಬ್ಬ ಸುದರ್ಶನ್, ಅಗೋನೋಡು ಸಮಂತಾ ! ಹೌದು. ಸರಕಾರ, ರಾಜಕೀಯ ಧುರೀಣರು, ಫಾರಿನ್ ಏಡ್ ಅಥವಾ ಒಂದು ಜಾತಿಮಠದ ಹಂಗಿಲ್ಲದೆ ಭಾರತದಲ್ಲಿ ಬದಲಾವಣೆಯ ತಂಗಾಳಿ ಬೀಸುತ್ತಿರುವವರು ಇಂಥವರೇ. ಒರಿಸ್ಸಾದ ಬೆಂಗಾಡಿನಲ್ಲಿ ಶಿಕ್ಷಣ ಕ್ಷೇತ್ರದ ನಂದನವನ ನಿರ್ಮಿಸಿದ ಆಧುನಿಕ ಕಳಿಂಗ ಸಾಮ್ರಾಜ್ಯದ ದೊರೆ ಡಾ.ಅಚ್ಯುತ ಸಮಂತಾ ಅವರ ಕಿರುಪರಿಚಯ.

ಚಿತ್ರ ಲೇಖನ : ರಾಜು ಅಡಕಳ್ಳಿ

ಒಂದು ಕಾಲಕ್ಕೆ ಆ ಮುನ್ನೂರು ಎಕರೆ ಜಾಗ ಕಾಡುಕುಪ್ಪೆ, ಮುಳ್ಳು ಕಂಟಿಗಳ ಕೊಂಪೆ. ಈಗ ಅದೇ ಪ್ರದೇಶ ಸಾಮಾಜಿಕವಾಗಿ ಮೂಲೆಗುಂಪಾದವರ ಶಿಕ್ಷಣಕ್ಕೆ ಶೋಭೆ ತಂದ ನಂದನವನ. ಎಲ್ಲಿ ನೋಡಿದರಲ್ಲಿ ಹಸುರು, ಆಧುನಿಕ ಕಟ್ಟಡಗಳ ಕ್ಯಾಂಪಸ್, ಗ್ರಂಥಾಲಯ, ಆಟದ ಮೈದಾನ, ಸಾವಿರಾರು ಅಧ್ಯಾಪಕರು, ಎಲ್ಲಕ್ಕೂ ಹೆಚ್ಚಾಗಿ ವಿದ್ಯಾರ್ಥಿ,ವಿದ್ಯಾರ್ಥಿನಿಯರ ಕಲರವ. ಕ್ಯಾಂಪಸ್ ತುಂಬೆಲ್ಲ ಉಜ್ವಲ ಭವಿಷದ್ದೇ ಕನಸು.

ಶೈಕ್ಷಣಿಕ ಕ್ಷೇತ್ರದ ಇತ್ತೀಚಿನ ಸವಾಲುಗಳನ್ನು ಮೀರಿನಿಲ್ಲುವ ಬೆರಗು ಹುಟ್ಟಿಸುವ ಈ ಅನುಭವ ಅನಾವರಣವಾಗಿದ್ದು, ಇತ್ತೀಚೆಗೆ ನಮ್ಮ ಪತ್ರಕರ್ತರ ತಂಡ ತೆರಳಿದಾಗ. ದೂರದ ಒರಿಸ್ಸಾದ ರಾಜಧಾನಿ ಭುವನೇಶ್ವರದ ಕಳಿಂಗ ವಿಶ್ವವಿದ್ಯಾಲಯದ ಅಂಗಳದಲ್ಲಿ.

ಕೇವಲ 6 ವರ್ಷಗಳಲ್ಲಿ ಕಳಿಂಗ ಕ್ಯಾಂಪಸ್‌ನಲ್ಲಿ 8 ಸಾವಿರ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಿದ್ದಾರೆ. ಜೊತೆಗೆ ಉಚಿತ ಊಟ ವಸತಿಗಳೊಂದಿಗೆ ಶಿಕ್ಷಣ ಕಲಿಯುತ್ತಿರುವ, ನಲಿಯುತ್ತಿರುವ 5 ಸಾವಿರ ಬುಡಕಟ್ಟು ವಿದ್ಯಾರ್ಥಿಗಳು. ಐಟಿಐ ನಿಂದ ಪ್ರಾರಂಭವಾದ ಪುಟ್ಟ ಶಿಕ್ಷಣ ಸಂಸ್ಥೆ ಇಂದು ಡೀಮ್ಡ್ ವಿಶ್ವವಿದ್ಯಾಲಯ. ಇದೇನು ಮ್ಯಾಜಿಕ್ಕಾ? ಅಥವಾ ಸರ್ಕಾರಿ ತಿಜೋರಿಯಿಂದ ಸಕತ್ತಾಗಿ ಸುರಿದು ಹೋಮ ಮಾಡಿದ ಯೋಜನೆಯಾ? ಇವೆರಡೂ ಅಲ್ಲ. ನಮ್ಮ ನಿಮ್ಮ ಹಾಗೇ ಎರಡೇ ಕೈ, ಎರಡೇ ಕಣ್ಣು, ಎರಡೇ ಕಾಲು ಇರುವ ಒಬ್ಬನೇ ವ್ಯಕ್ತಿಯ ನಿರಂತರ ಪ್ರಯತ್ನದ ಫಲಶೃತಿಯೇ ಕಳಿಂಗವೆಂಬ ವಿದ್ಯಾಸಾಗರ. ಈ ವಿದ್ಯಾಸಾಗರದ ನವನಿರ್ಮಾಣದ ನೇತಾರ ಡಾ. ಅಚ್ಯುತ ಸಮಂತಾ.

ನಿಸ್ಪ್ರಹ ಸೇವೆಗೆ ನೋಬೆಲ್ ಪ್ರಶಸ್ತಿ ಕೊಡಬಹುದಾದರೆ ಡಾ. ಸಮಂತಾ ಅತ್ಯಂತ ಯೋಗ್ಯ ಅಭ್ಯರ್ಥಿ. ಈ ವ್ಯಕ್ತಿಯನ್ನು ಅವರ ಬ್ಲ್ಯೂಚಿಪ್ ಕ್ಯಾಬಿನ್ ಒಳಗೆ ಭೇಟಿ ಮಾಡುವುದು ಹೇಗಪ್ಪಾ ಎಂದು ತಲೆ ತುರಿಸಿಕೊಳ್ಳುತ್ತಿರುವಾಗಲೇ ಕ್ಯಾಂಪಸ್ಸಿನ ಪಡಸಾಲೆಯಲ್ಲೇ ಸಿಂಪಲ್ ಆಗಿ ಈ ವಾಮನಮೂರ್ತಿ ಪ್ರತ್ಯಕ್ಷವಾದಾಗ ನಮಗೆಲ್ಲ ಆಶ್ಚರ್ಯವೋ ಆಶ್ಚರ್ಯ. ಇಡೀ ಕಳಿಂಗ ಅಧಿಪತಿಯಾಗಿರುವ ಸಮಂತಾ ತಮ್ಮನ್ನು ಚೀಫ್ ವರ್ಕರ್ ಎಂದು ನಮ್ಮಲ್ಲಿ ಪರಿಚಯಿಸಿಕೊಳ್ಳುವುದೇ ಒಂದು ರೋಮಾಂಚನ.

ಹವಾಯಿ ಚಪ್ಪಲಿ, ಸಿಂಪಲ್ ಕಾಟನ್ ಶರ್ಟ್, ಪ್ಯಾಂಟು, ಯಾರೇ ಎದುರಾದರೂ ಕೈ ಜೋಡಿಸಿ ಕುಶಲ ವಿಚಾರಿಸುವ ಹೃದಯ ಶ್ರೀಮಂತಿಕೆ. ಯಾವುದೇ ಭರ್ಜರಿ ಕ್ಯಾಬಿನ್ ಇಲ್ಲದೇ ಇಡೀ ಕ್ಯಾಂಪಸನ್ನೇ ವರ್ಕಿಂಗ್ ಕ್ಯಾಬಿನ್ ಮಾಡಿಕೊಂಡ ಸರಳತೆ. ಗುಡ್ಡ ಗಾಡು ಮಕ್ಕಳನ್ನು ತಮ್ಮ ಸ್ವಂತ ಮಕ್ಕಳೆಂದು ಭಾವಿಸಿಕೊಳ್ಳುವಷ್ಟು ಸೌಜನ್ಯತೆ. ಇಂಥ ಪಕ್ವತೆ, ಆದರ್ಶಗಳೆಲ್ಲ ವೃದ್ಧಾಪ್ಯದಲ್ಲಿ ಎಂದು ಭಾವಿಸಬೇಡಿ. ಸಮಂತಾ ಅವರಿಗೆ ಇನ್ನೂ ನಲವತ್ಮೂರೇ ವರ್ಷ. ಇನ್ನು ಮದುವೆ ಆಗಿಲ್ಲ. ಇಡೀ ಕಳಿಂಗ ಕ್ಯಾಂಪಸ್ಸೇ ಇವರ ಮನೆ. ಅಲ್ಲಿಯ ಸಾವಿರಾರು ವಿದ್ಯಾರ್ಥಿಗಳೇ ಇವರ ತುಂಬಿದ ಸಂಸಾರ. ಒಂದರ್ಥದಲ್ಲಿ ಇವರು ಸಂಸಾರಸ್ಥ ಸನ್ಯಾಸಿ.

ಸಮಂತಾ ಕಳಿಂಗ (ಡೀಮ್ಡ್) ವಿಶ್ವವಿದ್ಯಾಲಯವನ್ನು ಕಟ್ಟಿದ್ದಾರೆಂದರೆ ಅವರು ಕೋಠ್ಯಧೀಶ್ವರರ ಮಗನಾಗಿರಬೇಕು ಎಂದು ಭಾವಿಸಿದರೆ ನೀವು ಬೇಸ್ತು ಬೀಳುತ್ತೀರಿ. ಬಾಲ್ಯದಲ್ಲಿ ದಹಿಸುವ ಬಡತನ, ಕಷ್ಟಪಟ್ಟು ಗಳಿಸಿದ ಕೆಮಿಸ್ಟ್ರಿ ಪದವಿ. ಮುಂದೆ ಕೆಲಕಾಲ ಉಪನ್ಯಾಸಕ. 15 ವರ್ಷಗಳ ಹಿಂದೆ ಕೆಲಸಕ್ಕೆ ರಾಜೀನಾಮೆ. 5 ಸಾವಿರ ರೂಪಾಯಿ ಸಾಲದೊಂದಿಗೆ ಐಟಿಐ ತರಬೇತಿ ಕೇಂದ್ರ ಸ್ಥಾಪನೆ. ಎರಡೇ ಕೊಠಡಿಗಳಲ್ಲಿ ಎಲ್ಲ ಕೆಲಸ. ಆದರೆ ಈಗ 300 ಎಕರೆ ಪ್ರದೇಶದಲ್ಲಿ ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (KIIT) ಯೂನಿವರ್ಸಿಟಿ. 800 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ವಹಿವಾಟು, ಎರಡೂವರೆ ಸಾವಿರ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಕಳಿಂಗ ರಿಲೀಫ್ ಚಾರಿಟೇಬಲ್ ಟ್ರಸ್ಟ್, ಕಳಿಂಗ ಸಮಾಜ ವಿಜ್ಞಾನ ಸಂಸ್ಥೆ (ಕಿಸ್)ಗಳಂಥ ಅನೇಕ ಸಮಾಜ ಸೇವಾ ಕೇಂದ್ರಗಳು, ಎಂ.ಬಿ.ಎ.ಯಿಂದ ಹಿಡಿದು ಜನರಲ್ ಸ್ಟಡೀಸ್, ನರ್ಸಿಂಗ್, ಎಂಜಿನಿಯರಿಂಗ್, ಮೆಡಿಕಲ್, ಡೆಂಟಲ್ ಕೋರ್ಸ್‌ವರೆಗೆ ಹತ್ತು ಹಲವು ಶಿಕ್ಷಣ ಅವಕಾಶಗಳು. ಯಾವುದೇ ಪಾಶ್ಚಿಮಾತ್ಯ ರಾಷ್ಟ್ರಗಳ ವಿ.ವಿ.ಗೆ ಹೋಲಿಸಿದರೆ ಕಮ್ಮಿ ಇಲ್ಲದ ಕ್ಯಾಂಪಸ್. ಇವೆಲ್ಲ ಸಮಂತಾರೊಬ್ಬರಿಂದಲೇ ಸಾಕಾರಗೊಂಡಿದ್ದು ಎಂಬುದನ್ನು ಅರ್ಥ ಮಾಡಿಕೊಳ್ಳಲು ಅವರ ಸಾಧನೆಯ ಪಥದ ಮೇಲೆ ಕಣ್ಣಾಡಿಸಿದರೆ ಸಾಕು. ಹೀಗಾಗಿ ಸಮಂತಾ ಬರೇ ವ್ಯಕ್ತಿಯಲ್ಲ - ಅವರೊಬ್ಬ ಶಕ್ತಿ.

ಒರಿಸ್ಸಾದಲ್ಲಿ ಇತ್ತೀಚೆಗೆ ಅಭಿವೃದ್ಧಿಯ ಗಾಳಿ ಬೀಸುತ್ತಿದ್ದರೂ ಅಲ್ಲಿಯ ಗುಡ್ಡಗಾಡು ಪ್ರದೇಶ, ಹಳ್ಳಿಗಾಡುಗಳು ಇಂದಿಗೂ ಕಡುಬಡತನ, ಅನಕ್ಷರತೆಗಳಿಂದ ನಲುಗುತ್ತಿವೆ. ಇದನ್ನು ತಪ್ಪಿಸಲು ತಮ್ಮ ಕೈಲಾದ್ದನ್ನು ಮಾಡಬೇಕೆಂದು ಸಮಂತಾ ಸ್ವತಃ ಗುಡ್ಡಗಾಡು ಅಲೆದರು. ಸ್ಥಳೀಯರನ್ನು ಸಂಘಟಿಸಿದರು, ಮಕ್ಕಳನ್ನು ಶಾಲೆಗೆ ಕಳಿಸಿ ಎಂದು ಪಾಲಕರಿಗೆ ದುಂಬಾಲು ಬಿದ್ದರು, ಕಾಡಲ್ಲಿ, ಕುಗ್ರಾಮಗಳಲ್ಲಿ ಶಾಲೆಗಳೇ ಇಲ್ಲವೆಂಬುದು ಅರಿವಿಗೆ ಬಂದಾಗ ತಮ್ಮ ಕಳಿಂಗ ಕ್ಯಾಂಪಸ್ ಪಕ್ಕದಲ್ಲೇ ಕಿಸ್ (ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್) ಪ್ರಾರಂಭಿಸಿ ಗುಡ್ಡಗಾಡು ಮಕ್ಕಳಿಗೆ ವಸತಿ ಶಿಕ್ಷಣ ಕೊಟ್ಟರು.

ಈಗ ಈ ಕಿಸ್ ಸಂಸ್ಥೆಯೂ ಹೆಮ್ಮರವಾಗಿ ಬೆಳೆದು ಐದು ಸಾವಿರದಷ್ಟು ಬಡ ಮಕ್ಕಳಿಗೆ ನೆರಳು-ನೆಮ್ಮದಿ ನೀಡುತ್ತಾ ಇಡೀ ದೇಶದಲ್ಲೇ ಅತ್ಯಂತ ದೊಡ್ಡ ಬುಡಕಟ್ಟು ವಿದ್ಯಾರ್ಥಿಗಳ ಶಾಲೆ ಎಂಬ ದಾಖಲೆ ನಿರ್ಮಿಸಿದೆ. ಶಿಕ್ಷಣದ ಜೊತೆಗೇ ಮಕ್ಕಳ ಭವಿಷ್ಯಕ್ಕೆ ಆಧಾರವಾಗುವ ಹೊಲಿಗೆ, ಕಸೂತಿ, ಗುಡಿ ಕೈಗಾರಿಕೆ, ತೋಟಗಾರಿಕೆ, ಕಲೆ, ಸಾಹಿತ್ಯ, ಸಂಸ್ಕೃತಿ, ಕ್ರೀಡೆ ಮುಂತಾದ ಅನೇಕ ಚುಟವಟಿಕೆಗಳ ಆಗರವಾಗಿ ಈ ಕಿಸ್ ಕೆಲಸ ಮಾಡುತ್ತಿದೆ. ಇದಕ್ಕೆ ಯಾವುದೇ ರಾಜಕೀಯ ವ್ಯಕ್ತಿಗಳ, ಪಕ್ಷಗಳ ಸಂಪರ್ಕವಿಲ್ಲ. ಡಾ. ಕಲಾಂ, ದ್ರಾವಿಡ್, ತೆಂಡುಲ್ಕರ್, ಶತ್ರುಘ್ನ ಸಿನ್ಹಾ, ಸ್ವಾಮಿ ರಾಮದೇವ್ ಮುಂತಾದ ಗಣ್ಯರು ಸಮಂತಾರ ಸಾಮ್ರಾಜ್ಯಕ್ಕೆ ಭೇಟಿ ನೀಡಿ ಶಹಭಾಸ್ ಎಂದಿದ್ದಾರೆ. ನೀವು ಸಮಂತಾರ ಸಾಧನೆಯನ್ನು ಸಾಕ್ಷಾತ್ ನೋಡಲು ಒರಿಸ್ಸಾಕ್ಕೆ ಒಮ್ಮೆ ಯಾಕೆ ಹೋಗಬಾರದು? ನೆನಪಿಡಿ ; ಸಮಂತಾ ತಮ್ಮ ಬಗ್ಗೆ ಹೆಚ್ಚೇನು ಹೇಳುವುದಿಲ್ಲ, ಆದರೆ ಇಡೀ ಕಳಿಂಗ ಕ್ಯಾಂಪಸ್ಸೇ ಸಮಂತಾರ ಬಗ್ಗೆ ಸದಾ ಮಾತನಾಡುತ್ತೆ.

ಅಚ್ಯುತ ಅವರ ಈಮೇಲ್ ವಿಳಾಸ : achyuta@kiit.ac.in, achy

Monday, April 21, 2008

'ಎ ರಿಪೋರ್ಟರ್ ಎಟ್ ಲಾರ್ಜ್' ಭಾಗ 1

ಖ್ಯಾತ ಪತ್ರಕರ್ತ, ಕನ್ನಡಿಗ ಎಂ.ವಿ.ಕಾಮತ್ ಅವರ ಆತ್ಮಚರಿತ್ರೆ 'ಎ ರಿಪೋರ್ಟರ್ ಎಟ್ ಲಾರ್ಜ್' ಕನ್ನಡ ಸಂಗ್ರಹಾನುವಾದದ ಎರಡನೇ ಭಾಗ ಇಲ್ಲಿದೆ. ಕ್ರಿಶ್ಚಿಯನ್ನರೊಡನೆಯ ಕಾಮತ್ ಅವರ ಒಡನಾಟ, ತುಂಬಿದ ಮನೆಯಲ್ಲಿನ ಚೆಂದದ ಬಾಲ್ಯ, ಕೊಂಕಣಿ ಮೇಲಿನ ಭಾಷಾಪ್ರೇಮ, ಮೀನಿನ ಮೇಲಿನ ಪ್ರೀತಿ ಮುಂತಾದ ವಿವರಗಳನ್ನು ಲೇಖಕರು ಅನಾವರಣಗೊಳಿಸಿದ್ದಾರೆ.

ಸಂಗ್ರಹಾನುವಾದ : ಡಾ| 'ಜೀವಿ' ಕುಲಕರ್ಣಿ, ಮುಂಬೈ

ಕೆನರಾದಲ್ಲಿ ವಾಸವಾಗಿದ್ದ ರೋಮನ್ ಕೆಥೊಲಿಕ್ ಜನಾಂಗದ ಬಗ್ಗೆ ವಿವರವಾಗಿ ಕಾಮತರು ಬರೆಯುತ್ತಾರೆ. 1768ರಲ್ಲಿ, ಹೈದರಲಿ ಮತ್ತು ಬ್ರಿಟಿಶರ ನಡುವೆ ನಡೆದ ಕಾಳಗದಲ್ಲಿ, ಕೆಥೊಲಿಕ್ ಜನಾಂಗದವರು ಇಂಗ್ಲಿಷರಿಗೆ ಬೆಂಬಲ ನೀಡಿದ್ದರಿಂದ ಹೈದರಲಿಯು ಅವರ ಬಗ್ಗೆ ಬಹಳ ಕುಪಿತನಾಗಿದ್ದ. ಮುಂದೆ ಅರಸನಾದ ಟೀಪು ಅದೇ ಕೋಪ ಮುಂದುವರಿಸಿದ್ದ. ಇದರ ಬಗ್ಗೆ ಕ್ರಾಂತಿ ಪೆರಿಯಾಸ್ ಬರೆಯುತ್ತಾರೆ, `ಅವನು(ಟೀಪು) ರಾಜ್ಯವಾಳಿದ ಕಾಲ (1784-1799) ಕೆನರಾದ ಕ್ರಿಶ್ಚನ್ ಸಮಾಜಕ್ಕೆ ಕರಾಳ ದಿನಗಳಾಗಿದ್ದವು. ಸುಮಾರು 60 ಸಾವಿರ ಕ್ರಿಶ್ಚನ್ ಸ್ತ್ರೀಪುರುಷರನ್ನು ಬಂದಿಮಾಡಿ ಶ್ರೀರಂಗಪಟ್ಟಣದಲ್ಲಿ ಇಟ್ಟಿದ್ದ. ಟೀಪುನ ಅವಸಾನದ ನಂತರ ಅವರು ಮುಕ್ತರಾದರು. ಬೇಸಾಯ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದರು.' ಎಂದು.

ರಾಷ್ಟ್ರೀಯ ಮನೋಭಾವವುಳ್ಳ ಕ್ರಿಶ್ಚನ್ನರ ಬಗ್ಗೆ ಕಾಮತರು ಬರೆಯುತ್ತಾರೆ. ಮುಂಬೈಯ ಸೇಂಟ್ ಝೇವಿಯರ್ಸ್ ಕಾಲೇಜಿನಲ್ಲಿ ಬೇರೆ ಮತದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತಿರಲಿಲ್ಲ. ಭಿನ್ನ ಮತೀಯರಿಗೂ ಮುಕ್ತ ಪ್ರವೇಶವನ್ನಿ ನೀಡಬೇಕು ಎಂಬ ಗೊತ್ತುವಳಿಯನ್ನು `ಕೆಥೋಲಿಕ್ ಸ್ಟೂಡೆಂಟ್ಸ್ ಅಸೋಸಿಯೇಶನ್'ನಲ್ಲಿ ಪಾಸುಮಾಡಿಸಿದ ಜೋಕಿಂ ಆಳ್ವಾ ಅವರನ್ನು ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಧುರ್ ಅವರು ಕಾಲೇಜಿನಿಂದ ಹೊರಗೆಹಾಕಿದ್ದರಂತೆ. ಕಾಮತರು ಮಂಗಳೂರಿನ ಗವ್ಹರ್ನಮೆಂಟ್ ಕಾಲೇಜಿನ ವಿದ್ಯಾರ್ಥಿಯಾಗಿದ್ದರು. ಆ ಕಾಲದಲ್ಲಿ ಒಬ್ಬ ಕ್ರಿಶ್ಚನ್ ವಿದ್ಯಾರ್ಥಿಯೂ ಗಾಂಧೀ ಟೋಪಿ ಧರಿಸುವ ಧೈರ್ಯ ಮಾಡುತ್ತಿರಲಿಲ್ಲವಂತೆ. ಸೇಂಟ್ ಎಲೋಶಿಯಸ್ ಕಾಲೇಜಿನ ಅಧಿಕಾರಿಗಳು ತಮ್ಮಲ್ಲಿರುವ ಕ್ರಿಶ್ಚನ್ ವಿದ್ಯಾರ್ಥಿಗಳಿಗೆ ತಮ್ಮ ಹಿಂದೂ ಮಿತ್ರರನ್ನು ಅನುಕರಣೆ ಮಾಡದಿರಲು ತಾಕೀತುಮಾಡುತ್ತಿದ್ದರಂತೆ.

ಕೆನರಾ ಜಿಲ್ಲೆಯಲ್ಲಿ ನಡೆಯುತ್ತಿದ್ದ ಮತಾಂತರಗಳ ಬಗ್ಗೆ ಬರೆಯುತ್ತಾರೆ. ಮತಾಂತರಗೊಂಡವರಲ್ಲಿ ಹೆಚ್ಚಿನ ಜನ ಬಡವರು, ಶೂದ್ರರು ಆಗಿರುತ್ತಿದ್ದರಂತೆ. ಕ್ರಿಶ್ಚನ್ ಮಿಶನರಿಗಳು ಮಾಡಿದ ವಿದ್ಯಾಪ್ರಸಾರದ ಬಗ್ಗೆ ಬರೆಯುತ್ತಾರೆ. `ರೆವರೆಂಡ್ ಹರ್‌ಮನ್ ಮೊಗ್ಲಿಂಗರು 1836ರಲ್ಲಿ `ಮಂಗಳೂರು ಸಮಾಚಾರ' ಪತ್ರಿಕೆ ಪ್ರಾರಂಭಿಸಿದರು. ರೆವೆರೆಂಡ್ ಗಾಡ್ ಪ್ರೈ ವೈಗ್ಲೆ 1839ರಲ್ಲಿ ಕ್ರಿಸ್ತಗೀತಗಳನ್ನು ಕನ್ನಡದಲ್ಲಿ ಬರೆದರು. ರೆವೆರೆಂಡ್ ಕಿಟೆಲ್ ಅವರು 1853ರಲ್ಲಿ ಕನ್ನಡ-ಇಂಗ್ಲಿಷು ನಿಘಂಟು ಪ್ರಕಟಿಸಿದರು.'

ಬಾಸೆಲ್ ಮಿಶನ್ 1913ರಲ್ಲಿ ಬಹುದೊಡ್ಡ ಉದ್ಯಮ ಪ್ರಾರಂಭಿಸಿತ್ತು. 20 ಸಾವಿರ ಜನ ಕೆಲಸಮಾಡುತ್ತಿದ್ದರು. ಅವರು 1923ರಲ್ಲಿ ಆಸ್ಪತ್ರೆ ಪ್ರಾರಂಭಿಸಿದರು. ಉಡುಪಿಯ ಪ್ರಥಮ ಮಹಿಳಾ ವೈದ್ಯ, ಡಾಕ್ಟರ್ ಲೊಂಬಾರ್ಡ್ ಎಂಬವಳು ಒಂದು ದಂತಕತೆಯಾಗಿದ್ದಳಂತೆ. ಬ್ರಾಹ್ಮಣಳಾಗಿದ್ದ ಕಮಲಾ ಎಂಬ ಮಿಡ್‌ವೈಫ್(ಸೂಲಗಿತ್ತಿ) ಆಗ ಬಹಳ ಪ್ರಸಿದ್ಧಳಾಗಿದ್ದಳಂತೆ. ಕಾಮತ ಪರಿವಾರದ ಹೆಚ್ಚಿನ ಮಕ್ಕಳ ಹೆರಿಗೆ ಅವಳೇ ಮಾಡಿಸಿದ್ದಳಂತೆ. ಉಡುಪಿ ಹಾಗೂ ಮಂಗಳೂರು ವಿಭಾಗದಲ್ಲಿ ಡಾ. ಟಿ.ಎಂ.ಎ.ಪೈ ಫೌಂಡೇಶನ್ ಅಸ್ತಿತ್ವಕ್ಕೆ ಬಂದ ಮೇಲೆ ಇತರ ವಿದ್ಯಾ ಸಂಸ್ಥೆಗಳು ತಮ್ಮ ಮಹತ್ವ(ಆದ್ಯತೆ) ಕಳೆದುಕೊಂಡವು ಎನ್ನುತ್ತಾರೆ.

ಆ ಕಾಲದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ, ಮೊದಮೊದಲು ಬ್ರಾಹ್ಮಣರದೆ ಮೇಲುಗೈ ಇತ್ತಂತೆ. ಇವರ ಮಾತಾಮಹ(ತಾಯಿಯ ತಂದೆ) ಓದು, ಬರೆಹ, ಗಣಿತದಲ್ಲಿ ನಿಷ್ಣಾತರಾಗಿದ್ದರು. ಪರ್ಶಿಯನ್ ಕೂಡ ಕಲಿತಿದ್ದರು. ಆ ಕಾಲದಲ್ಲಿ ಐಗಳ ಶಾಲೆ ಪ್ರಸಿದ್ಧವಾಗಿದ್ದವು. ಆಗ ಮಂಗಳೂರಿನ ಜನರು ಹೆಚ್ಚಿನ ಶಿಕ್ಷಣ್ಕಾಗಿ ಮದ್ರಾಸಿಗೆ ತೆರಳುತ್ತಿದ್ದರು. 1900ರಲ್ಲಿ ಮಂಗಳೂರು ಮಲಬಾರಿನ ಕಾಲಿಕತ್ ಜಿಲ್ಲೆಗೆ ಸೇರಿತ್ತು ಆದ್ದರಿಂದ ಮದ್ರಾಸಿನ ಸಂಬಂಧ ಹೆಚ್ಚಾಗಿತ್ತು. ಆ ಕಾಲದಲ್ಲಿ ಎತ್ತಿನ ಗಾಡಿ, ಕುದುರೆ ಜಟಕಾ ಸಾಮಾನ್ಯವಾಗಿದ್ದವು. ರಾತ್ರಿಪ್ರಯಾಣ ಪ್ರಸಿದ್ಧವಾಗಿತ್ತು. ಬಸ್ 20ರ ದಶಕದಲ್ಲಿ ಬಂತು ಎಂದು ಬರೆಯುತ್ತಾರೆ.

ಮಾಧವ ಕಾಮತರ ಜನನ ಉಡುಪಿಯಲ್ಲಾಯಿತು (7, ಸೆಪ್ಟೆಂಬರ್ 1921). ತಮ್ಮ ನೆಚ್ಚಿನ ಉಡುಪಿಯ ಬಗ್ಗೆ ವಿವರವಾಗಿ ಬರೆಯುತ್ತಾರೆ. `ಉಡುಪಿ'ಯನ್ನು ಬ್ರಿಟಿಶರು ತಪ್ಪು ಉಚ್ಚರಿಸಿ `ಉಡಿಪಿ' ಎಂದರಂತೆ. `ಉಡು' ಎಂದರೆ ನಕ್ಷತ್ರ. `ಪ' ಎಂದರೆ ಒಡೆಯ. ಉಡುಪಿಯಲ್ಲಿ ಚಂದ್ರಮೌಳೇಶ್ವರ ದೇವಸ್ಥಾನವಿದೆ. `ಉಡುಪಂ' ಎಂದರೆ ನೌಕೆ. ದ್ವಾರಕೆಯಿಂದ ಕೃಷ್ಣನ ಮೂರ್ತಿ ಒಂದು ನೌಕೆಯಲ್ಲಿ ಉಡುಪಿಗೆ ಬಂತು. ಶ್ರೀ ಮಧ್ವಾಚಾರ್ಯರು ಅದನ್ನು ಸ್ಥಾಪಿಸಿ ಕೃಷ್ಣ ಮಂದಿರದ ಅಸ್ತಿತ್ವಕ್ಕೆ ಕಾರಣರಾದರು. ಅದರ ಹಿಂದಿನ ಕತೆ ಹೀಗಿದೆ. ಗೋಪೀಚಂದನದ ಬಂಡೆಯಲ್ಲಿ ಶ್ರೀ ಕೃಷ್ಣನ ಮೂರ್ತಿ ಇತ್ತು. ಅದನ್ನು ಹೊತ್ತು ತಂದ `ಪಂಡಿ'(ನೌಕೆ) ಬಿರುಗಾಳಿಗೆ ಸಿಲುಕಿತ್ತು. ಶ್ರೀ ಮಧ್ವರು ತಮ್ಮ ಅಂಗವಸ್ತ್ರ ಬೀಸಿ ನೌಕೆ ನಡೆಸುವವನಿಗೆ ದಾರಿ ತೋರಿದರು, ರಕ್ಷಿಸಿದರು. ಗೋಪೀಚಂದನದ ಬಂಡೆಯಲ್ಲಿ ಶ್ರೀ ಕೃಷ್ಣನ ವಿಗ್ರಹ ಅಡಗಿದ್ದು ಶ್ರೀ ಮಧ್ವರಿಗೆ ಮಾತ್ರ ತಿಳಿದಿತ್ತು. ಅದನ್ನು ಕಾಣಿಕೆಯಾಗಿ ಪಡೆದರು. ಶ್ರೀ ಕೃಷ್ಣದೇವಾಲಯದ ಬಗ್ಗೆ ಇದ್ದ ಹಲವಾರು ಕತೆಗಳಲ್ಲಿ ಇದು ನಂಬಲರ್ಹವಾಗಿದೆ ಎನ್ನುತ್ತಾರೆ.

`ನಮಸ್ತೇ ಶಾರದಾ ದೇವಿ ಕಾಶ್ಮೀರಪುರವಾಸಿನೀ' ಎನ್ನುತ್ತ, ತಾವು ಸಾರಸ್ವತ ಬ್ರಾಹ್ಮಣ ಮನೆತನಕ್ಕೆ ಸೇರಿದವರು ಎಂದು ಬರೆಯುತ್ತಾರೆ. ಜವಾಹರಲಾಲ ನೆಹರು ಅವರು ಕಾಶ್ಮೀರಿ ಬ್ರಾಹ್ಮಣರು. ಹಾಗೆ ನೋಡಿದರೆ ಸಾರಸ್ವತರು ಮೂಲತಃ ಕಾಶ್ಮೀರದವರು. ಸ್ಕಂದ ಪುರಾಣದ ಸಹ್ಯಾದ್ರಿ ಖಂಡದ ಪ್ರಕಾರ ಸಾರಸ್ವತ ಬ್ರಾಹ್ಮಣರು ಗೌಡದೇಶದವರು, ಬಂಗಾಲದವರು. ಸಾರಸ್ವತರ ಮೂಲ ಸರಸ್ವತೀ ನದೀತೀರದಲ್ಲಿತ್ತು. ಇಂದು ಆ ನದಿ ಇಲ್ಲ. ಅದು ಗುಪ್ತವಾಗಿದೆ (ಲುಪ್ತವಾಗಿದೆ). ಸರಸ್ವತೀ ನದಿ ಗುಪ್ತವಾದ ಮೇಲೆ ಸಾರಸ್ವತರು ಭಾರತದಲ್ಲಿ ಎಲ್ಲೆಡೆ ಹರಡಿದರು. ಸಾರಸ್ವತರಿಗೆ ಮೀನು ಬಹಳ ಪ್ರೀತಿಯ ಆಹಾರ. ಅದರ ಬಗ್ಗೆ ಅನೇಕ ಕತೆ-ಉಪಕತೆಗಳನ್ನು ಹೇಳುತ್ತಾರೆ. ಒಂದು ಕತೆ ಹೀಗಿದೆ. ಗೋವೆಯ ಒಬ್ಬ ಸಾರಸ್ವತ ಬ್ರಾಹ್ಮಣನಿಗೆ ಯಮಧರ್ಮ ಸಂಜೆಯೊಳಗಾಗಿ ಈ ಭೂಮಿಯನ್ನು ತೊರೆಯಲು ಸಿದ್ಧನಾಗು ಎಂದು ಹೇಳುತ್ತಾನೆ. ಅಡಿಗೆಯ ಮನೆಯಿಂದ ಆಗ ಮೀನಬೇಯಿಸುವ ವಾಸನೆ ಬಂತಂತೆ. ಅವನು ಯಮನಿಗೆ ಮೂರು ತಾಸು ಅವಕಾಶ ನೀಡಲು ಕೇಳುತ್ತಾನಂತೆ. ಕಾರಣ ಈ ಲೋಕ ಬಿಡುವ ಮುನ್ನ ತೃಪ್ತಿಯಾಗುವಂತೆ `ಫಿಶ್-ಕರಿ' ಅವನಿಗೆ ತಿನ್ನುವ ಕೊನೆಯ ಆಸೆಯಾಯಾಗಿತ್ತು. ಇಂಥ ಕತೆ ನಂಬಲು ಯೋಗ್ಯವಾಗಿದೆ ಎಂದು ಕಾಮತರು ಬರೆಯುತ್ತಾರೆ.

ಕಾಮತರು ತಮ್ಮ ಮನೆತನದ ವಿವರ ನೀಡುತ್ತಾರೆ. ಅವರ ತಂದೆ ಮೀನು ತಿನ್ನುತ್ತಿರಲಿಲ್ಲವಂತೆ. ಆದರೆ ಅವರ ಮಾತಾಮಹ(ತಾಯಿಯ ತಂದೆ) ಮೀನು ತಿನ್ನುತ್ತಿದ್ದರಂತೆ. ಕಾಮತರ ಅಜ್ಜಿ ಮನೆಯಲ್ಲಿ ಮೀನು ಬೇಯಿಸಲು ಬಿಡುತ್ತಿರಲಿಲ್ಲವಂತೆ. ಆ ಕೆಲಸಕ್ಕೆ ಮನೆಯ ಪಾತ್ರೆಗಳನ್ನು ಬಳಸುವಂತಿರಲಿಲ್ಲ. ಮೀನು ತಿನ್ನಲು ಮನೆಯ ಸದಸ್ಯರು ಬಯಸಿದರೆ ಮನೆಯ ಹೊರಗೆ ಇರುವ ಕೋಣೆಯಲ್ಲಿ, ಮಣ್ಣಿನ ಮಡಕೆ ಬಳಸಿ ಬೇಯಿಸಲು ಅನುಮತಿ ನೀಡುತ್ತಿದ್ದರು. ಆಳುಗಳು ವಾಸಿಸುವ ಸ್ಥಳದಲ್ಲಿ ಹೋಗಿ ತಿನ್ನಲು ಬಿಡುತ್ತಿದ್ದರು.

ಸಾರಸ್ವತರು ಹೆಚ್ಚಾಗಿ ವಾಸಿಸಿರುವ ಪ್ರದೇಶ ಕೊಂಕಣಪಟ್ಟಿ, ಅದುವೆ ಪರಶುರಾಮ ಕ್ಷೇತ್ರ. ಅದರ ಬಗ್ಗೆ ಬರೆಯುತ್ತಾರೆ. ಸಾರಸ್ವತರು ಸೀಖರಂತೆ, ಸಿಂಧಿಗಳಂತೆ ಜಗತ್ತಿನ ಎಲ್ಲ ಭಾಗಗಳಲ್ಲಿ ಹೇಗೆ ಹರಡಿದ್ದಾರೆಂಬ ಬಗ್ಗೆ ಬರೆಯುತ್ತಾರೆ. ಸಾರಸ್ವತರಲ್ಲಿ ಊರ ಹೆಸರುಗಳನ್ನು ಬಳಸುತ್ತಾರೆ. ಕಾರ್ನಾಡ, ಪೇಜಾವರ, ಬೆನಗಲ್ ಮೊದಲಾದ ಉದಾಹರಣೆ ಕೊಡುತ್ತಾರೆ. ವಿದೇಶದಲ್ಲಿ ಒಬ್ಬ ಮೂಡುಬಿದ್ರಿ ಎಂಬವರನ್ನು ಕಂಡಿದ್ದರಂತೆ. ಅವರು ಸಾರಸ್ವತರೆಂದು ತಿಳಿದಾಗ ತಮಗಾದ ಆನಂದವನ್ನು ಬಣ್ಣಿಸುತ್ತಾರೆ.

ಕಾಮತರು ಬರೆಯುವಾಗ ಕೆಲಸಲ ಕವಿತ್ವಕ್ಕೆ ಮಾರುಹೋಗುತ್ತಾರೆ. ತಮ್ಮ ಮನೆಯ ಬಗ್ಗೆ ಬರೆವಾಗ ಥಾಮಸ್ ಹುಡ್ ಅವರ `ಮನೆ ಮನೆ ನನ್ನ ಮನೆ | ನಾನು ಹುಟ್ಟಿ ಬೆಳೆದ ಮನೆ' ನೆನೆಯುತ್ತಾರೆ. ಇಡೀ ಇಂಗ್ಲಿಷ್ ಪದ್ಯವನ್ನು ಉದ್ಧರಿಸುತ್ತಾರೆ. ಕಾಮತರ ಅಜ್ಜ ವ್ಯಾಪಾರ ಮಾಡುತ್ತಿದ್ದರು. ಅಮ್ಮೆಂಬಳದಲ್ಲಿ ತಮ್ಮ ಪೂರ್ವಜರ ಮನೆಯಲ್ಲಿ ವಾಸಿಸುತ್ತಿದ್ದರು. ಅವರಿಗೆ ಎಂಟು ಮಕ್ಕಳು. (ಏಳು ಗಂಡು ಒಂದು ಹೆಣ್ಣು). ಅವರ ತಂದೆ ಐದನೆಯ ಮಗ. 1882ರಲ್ಲಿ ಜನಿಸಿದ್ದ ತಂದೆಯವರು ರಾಷ್ಟ್ರಕವಿ ಗೋವಿಂದ ಪೈ ಅವರ ಸಹಪಾಠಿಯಾಗಿದ್ದರಂತೆ. ಇವರು 1900ರಲ್ಲಿ ಮೆಟ್ರಿಕ್ಯುಲೇಶನ್ ಪಾಸಾದಾಗ ಕನ್ನಡ ವಿಷಯದಲ್ಲಿ ಅತ್ಯಧಿಕ ಗುಣ ಪಡೆದಿದ್ದರು. ಸಹಪಾಠಿ ಪೈಗಳಿಗಿಂತ ಹೆಚ್ಚು. ಮುಂದೆ ಇವರು ವಕೀಲಿ ವೃತ್ತಿಯಲ್ಲಿ ಪ್ರಸಿದ್ಧಿ ಪಡೆದರೆ, ಪೈ ಹಿರಿಯ ಲೇಖಕರಾದರು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಇವರ ತಂದೆ ಮದ್ರಾಸಿನ ಕ್ರಿಶ್ಚನ್ ಕಾಲೇಜು ಸೇರಿದರು. ಕಾಮತರ ತಾಯಿ ಉಡುಪಿಯ ಶ್ರೀಮಂತ ಜಮೀನುದಾರರ ಏಕಮಾತ್ರ ಪುತ್ರಿಯಾಗಿದ್ದರು. ಕಾಮತರ ತಂದೆ ವಕೀಲಿ ವೃತ್ತಿಯನ್ನು ಉಡುಪಿಯಲ್ಲಿ ಪ್ರಾರಂಭಿಸಿದರು. ಯಶಸ್ಸು ಪಡೆದರು. ಆ ಕಾಲದಲ್ಲಿ ಇವರು ಕಟ್ಟಿಸಿದ ಮನೆ ಉಡುಪಿಯಲ್ಲಿಯೇ ಅತಿ ದೊಡ್ಡದಾಗಿತ್ತಂತೆ. ಬಾವಿಯಿಂದ ನೀರು ಸೇದುವುದು ಮಹಿಳೆಯರಿಗೆ ಸಾಹಸದ ಕೆಲಸವಾಗಿತ್ತಂತೆ. ಮೂವತ್ತು ಫೂಟು ಆಳದಿಂದ ನೀರು ಸೇದಿ ಕೊಡಗಳನ್ನು ಹೊತ್ತು ಒಯ್ಯುವ ದೃಶ್ಯ ಆಕರ್ಷಕವಾಗಿರುತ್ತಿತ್ತು. ನೀರು ಸೇದುವುದರಿಂದಾಗಿ ಸ್ತ್ರೀಯರು ತೆಳ್ಳಗಾಗಿ ಆಕರ್ಷಕರಾಗಿ ಕಾಣುತ್ತಿದ್ದರಂತೆ, ಕೊಬ್ಬಿಲ್ಲದ ದೇಹ ಸೌಷ್ಠವ ಪಡೆಯುತ್ತಿದ್ದರಂತೆ. ಎಲ್ಲ ನೆನಪುಗಳನ್ನು ಕಾಮತರು ದಾಖಲಿಸುತ್ತ ಚಿತ್ರವತ್ತಾಗಿ ಬಣ್ಣಿಸುತ್ತ ಹೋಗುತ್ತಾರೆ.

ಅವರ ದೊಡ್ಡಮನೆ ಯಾವಾಗಲೂ ಜನರಿಂದ ತುಂಬಿ ತುಳುಕುತ್ತಿತ್ತು. ``ತಾಯಿಯ ತಂದೆ ಮತ್ತು ತಾಯಿ, ನನ್ನ ತಾಯಿ ಹಾಗೂ ತಂದೆ, ವಿಧವೆಯಾದ ಸೋದರಿಯೊಬ್ಬಳು, ಇಬ್ಬರು ಅಣ್ಣಂದಿರು, ಒಬ್ಬ ಹಿರಿಯ ಅಕ್ಕ, ನಾಲ್ವರು ತಂದೆಯ ಸೋದರರ ಸಂತಾನ, ನಾನು, ಇಬ್ಬರು ತಾಯಿಯ ಕಡೆಯ ಸೋದರರ ಮಕ್ಕಳು (ವಿದ್ಯಾಭ್ಯಾಸಕ್ಕಾಗಿ ಉಡುಪಿಗೆ ಬಂದು ಸೇರಿದವರು), ಒಬ್ಬಿಬ್ಬರು ದೂರದ ಸಂಬಂಧಿಗಳು, ಒಬ್ಬ ಅಡಿಗೆಯವಳು, (ಕುಟುಂಬದ ಒಬ್ಬ ಸದಸ್ಯಳಂತೆ ಇದ್ದ, ಮಕ್ಕಳನ್ನು ಆಗಾಗ ಗದರಿಸುವ ಮತ್ತು ತಿದ್ದುವ ಜವಾಬ್ದಾರಿ ಹೊತ್ತ ಸಾರಸ್ವತ ಸಮಾಜದ ಒಬ್ಬ ವಿಧವೆ), ಮೇಲಿನ ಕೆಲಸದ ಆಳು - ಹೀಗೆ ಯಾವುದೇ ದಿನಕ್ಕೆ ಇಪ್ಪತ್ತಕ್ಕೆ ಮೀರಿದ ಸಂಖ್ಯೆಯಲ್ಲಿ ಜನರು ಮನೆಯಲ್ಲಿ ಇರುತ್ತಿದ್ದರು'' ಎಂದು ಕಾಮತರು ಬರೆಯುತ್ತಾರೆ.

ಆ ಕಾಲದಲ್ಲಿ ಸ್ತ್ರೀಯರು ಬೇಗನೆ ಎದ್ದು ಹೇಗೆ ಮನೆಗೆಲಸದಲ್ಲಿ ತೊಡಗುತ್ತಿದ್ದರು ಎಂಬ ವಿವರ ಕೊಡುತ್ತಾರೆ. ಆಕಳು ಎಮ್ಮೆಗಳಿಂದ ಹಾಲು ಕರೆಯುವುದು. ಮನೆಯ ಪರಿವಾರಕ್ಕೆ ಮೂರು ಸಲ ಆಹಾರ ಒದಗಿಸುವುದು ಹೆಂಗಳೆಯರಿಗೆ ಇಡೀ ದಿನದ ಕೆಲಸವಾಗಿ ಬಿಡುತ್ತಿತ್ತು. ಆ ಕಾಲದಲ್ಲಿ ಎರಡು ರೂಪಾಯಿ ನಾಲ್ಕಾಣೆಗೆ 40 ಸೇರು ಅಕ್ಕಿ ದೊರೆಯುತ್ತಿತ್ತು. ಆಳಿನ ತಿಂಗಳ ಸಂಬಳ ಎರಡು ರೂಪಾಯಿ. ಆ ಕಾಲದಲ್ಲಿ ರೇಡಿಯೋ, ಟೆಲಿವಿಜನ್ ಇರಲಿಲ್ಲ. ಸಿನೇಮಾ ನಾಟಕಗೃಹ ಇರಲಿಲ್ಲ. ಓದಲು ಪತ್ರಿಕೆ, ಪುಸ್ತಕ ಇರಲಿಲ್ಲ. ಇಡೀ ದಿನ ದುಡಿದ ಮೇಲೆ ಸಂಜೆ ಗುಡಿಗೆ ಹೋಗುವದೇ ಮನರಂಜನೆ ಪಡೆಯುವ ಸಮಯವಾಗಿತ್ತು.

ಹಬ್ಬಹರಿದಿನಗಳಿಗೆ ಕೊರತೆ ಇರಲಿಲ್ಲ. ಯಾರಾದರೂ ಹಬ್ಬಗಳ ಪಟ್ಟಿ ಕೇಳಿದರೆ ಕಾಮತರ ಬಾಯಿಯಿಂದ ಒಂದು ಪಟ್ಟಿ ಬಂದುಬಿಡುತ್ತಿತ್ತು. ಗಣೇಶ ಚತುರ್ಥಿ, ನಾಗಪಂಚಮಿ, ಸುಬ್ರಹ್ಮಣ್ಯ ಷಷ್ಟಿ, ರಥಸಪ್ತಮಿ, ಗೋಕುಲಾಷ್ಟಮಿ, ರಾಮ ನವಮಿ, ವಿಜಯದಶಿಮಿ, (ಆಷಾಢ) ಏಕಾದಶಿ...ಕಾಮತರ ಅಜ್ಜಿಗೆ ಗ್ರೆಗೋರಿಯನ್ ಕೆಲೆಂಡರ್ ಮಹತ್ವದ್ದಾಗಿರಲಿಲ್ಲ. ಅವಳಿಗೆ ಸಂವತ್ಸರ, ಮಾಸ (ಚೈತ್ರ, ವೈಶಾಖ, ಜೇಷ್ಠ...), ದಿನ (ಪಾಡ್ಯ, ಬಿದಗಿ, ತದಗಿ,..), ನಕ್ಷತ್ರ (ಅಶ್ವಿನಿ, ಭರಣಿ, ಕೃತ್ತಿಕಾ..) ಮುಖೋದ್ಗತವಾಗಿದ್ದವಂತೆ. ಅವರ ಅಜ್ಜಿ ನಿರಕ್ಷರಿಯಾಗಿದ್ದರೂ ಆದರೆ ಅವರ ಜ್ಞಾನ ಅಗಾಧವಾಗಿತ್ತು. ಅವರಿಗೆ ಜಾತಕ ಹಾಕಲು ಬರುತ್ತಿರಲಿಲ್ಲ ಆದರೆ ಜಾತಕ ಕೂಡುತ್ತದೆಯೋ ಇಲ್ಲವೋ ತಿಳಿಯುತ್ತಿತ್ತು. ರಾಮಾಯಣ, ಮಹಾಭಾರತ, ಭಾಗವತ ಕತೆಗಳೆಲ್ಲ ಗೊತ್ತಿದ್ದವು. ಅಜ್ಜಿ ಹಾಲು ಕರೆವಾಗ, ಮೊಸರು ಕಡೆವಾಗ ಕತೆ ಹೇಳುತ್ತಿದ್ದರು. 3 ವರ್ಷಕ್ಕೆ ಅಜ್ಜಿಯ ಪಾಠ ಪ್ರಾರಂಭವಾಗುತ್ತಿತ್ತಂತೆ. ಇಂದಿನ ಸುಶಿಕ್ಷಿತ `ಸಾಕ್ಷರಿ' ತಾಯಂದಿರನ್ನು ಹೋಲಿಸಿದರೆ ನಮ್ಮ ಅಜ್ಜಿ ಹೆಚ್ಚು ಸಾಕ್ಷರಿಯಾಗಿದ್ದರು' ಎಂದು ಕಾಮತರು ಉದ್ಗಾರ ತೆಗೆಯುತ್ತಾರೆ.

ಮನೆಯಲ್ಲಿ ಅಜ್ಜಿಯನ್ನು ಯಾರೂ `ಅಜ್ಜಿ' ಎಂದು ಕರೆಯುತ್ತಿರಲಿಲ್ಲವಂತೆ. ಎಲ್ಲರಿಗೂ ಅವರು `ಅಕ್ಕ' ಆಗಿದ್ದರು. ಅವರ ತಂಗಿಯೊಬ್ಬಳು ಅವರನ್ನು ಅಕ್ಕ ಎಂದು ಕರೆಯುತ್ತಿದ್ದಳು. ಅದೇ ಎಲ್ಲರಿಗೂ ರೂಢಿಯಾಯಿತು. ಅಜ್ಜಿ ಮಡಿ-ಮೈಲಿಗೆ ಬಹಳ ಪಾಲಿಸುತ್ತಿದ್ದರು. ಅವರನ್ನು ಸ್ನಾನ ಮಾಡದೆ ಯಾರೂ ಸ್ಪರ್ಶಿಸುವಂತಿರಲಿಲ್ಲ. ಮನೆಯಲ್ಲಿ ಸ್ತ್ರೀಯರು ಋತುಮತಿಯರಾದಾಗ ಅವರನ್ನು ಅಸ್ಪೃಶ್ಯರಂತೆ ದೂರ ಇಡಲಾಗುತ್ತಿತ್ತು. ನಾಲ್ಕುದಿನ ನೀರು ಕುಡಿಯಲು ಕೂಡ ಅವರ ಬೇರೆ ಪಾತ್ರೆ ಬಳಸಬೇಕಾಗುತ್ತಿತ್ತು. ಅವರಿಗೆ ಯಾವ ಕೆಲಸ ಇರಲಿಲ್ಲ. ಪಲ್ಲೆಕಾಯಿ ಹೆಚ್ಚುವುದು, ನೀರು ಸೇದುವುದು ಕೂಡ ನಿಷಿದ್ಧವಾಗಿತ್ತು. ಈ ಸಂದರ್ಭದಲ್ಲಿ ಕಾಮತರು ಬರೆಯುತ್ತಾರೆ, `ಹವ್ಯಕ ಬ್ರಾಹ್ಮಣರಿಗಿಂತ ಸಾರಸ್ವತರು ಸ್ವಲ್ಪ ಮುಂದುವರಿದವರಾಗಿದ್ದರು.' ಎಂದು. ಬ್ರಾಹ್ಮಣ ವಿಧವೆಯರು ಚಿಕ್ಕ ಪ್ರಾಯದಲ್ಲಿ ಕೂಡ ತಲೆ ಬೋಳಿಸಿಕೊಂಡು ಕೆಂಪು ಸೀರೆ ಉಡಬೇಕಾಗುತ್ತಿತ್ತು. ಆದರೆ ಕಾಮತರ ತಂದೆ ವಿಧವೆಯಾದ ತಮ್ಮ ಮಗಳಿಗೆ ಕೂದಲು ಇಟ್ಟುಕೊಂಡಿರಲು ಅನುಮತಿ ನೀಡಿದ್ದರು. ಅವಳಿಗೆ ಬೇಕಾದ ಬಣ್ಣದ ಬಟ್ಟೆ ಉಡಲೂ ಹೇಳಿದ್ದರಂತೆ. ಆ ಕಾಲದಲ್ಲಿ ವಿಧವೆಯರಿಗೆ ಪುನರ್ ವಿವಾಹ ಇರಲಿಲ್ಲ.

1990ರಲ್ಲಿ ಒಬ್ಬ ಜಸ್ಯುಯಿಟ್ ವಿದ್ವಾಂಸ ಫಾದರ್ ಸಿ.ಸಿ.ಎ. ಪೈ ಎಂಬವರು `ಕೊಂಕಣಿ ಕಲ್ಚರ್ ಆಫ್ ಕರ್ನಾಟಕ' ಎಂಬ ಪ್ರಬಂಧವನ್ನು ಕಾಮತರಿಗೆ ಕಳಿಸಿದ್ದರಂತೆ. ಅದನ್ನು ಓದಿದ ಮೇಲೆ ಕಾಮತರಿಗೆ ತಮ್ಮ ಸಂಸ್ಕೃತಿಯ ಬಗ್ಗೆ ಎಷ್ಟು ಕಡಿಮೆ ತಿಳಿದಿದೆ ಎಂಬುದರ ಅರಿವಾಯಿತಂತೆ. ಅದರಲ್ಲಿ ಸಾರಸ್ವತ ಬ್ರಾಹ್ಮಣರ ಹಾಗೂ ರೋಮನ್ ಕೆಥೊಲಿಕ್‌ರ ಸಾಂಸ್ಕೃತಿಕ ಸಾಮ್ಯವನ್ನು ಲೇಖಕರು ಚಿತ್ರಿಸಿದ್ದಾರಂತೆ. ಫಾದರರು ತಮ್ಮ ಪ್ರಬಂಧದಲ್ಲಿ 30 ಕೊಂಕಣಿ ಜಾನಪದ ಗೀತೆಗಳನ್ನು ಉದ್ಧರಿಸಿದ್ದಾರಂತೆ. ತೊಟ್ಟಿಲು ತೂಗುವಾಗಿನ ಹಾಡಿನಿಂದ ಹಿಡಿದು ಮದುವೆಯ ಹಾಡಿನವರೆಗೆ ಹಾಡುಗಳಿವೆ. ಈ ಹಾಡುಗಳು ಗೋವೆಯಲ್ಲಿವೆ, ಆದರೆ ಕೆನರಾಕ್ಕೆ ಬರಲಿಲ್ಲ ಎಂದು ಕಾಮತರು ವಿಷಾದಿಸುತ್ತಾರೆ. ಇಲ್ಲಿ ಕಾಮತರ ಕವಿ ಮನ ಕುಣಿದಾಡುತ್ತದೆ. ಒಂದು ಹಾಡಿನ ಆಂಗ್ಲ ಅನುವಾದವನ್ನೂ ಕೊಡುತ್ತಾರೆ. ಆ ಹಾಡಿನಲ್ಲಿ `ಮಲ್ಲಿಗೆ ದಂಡೆ' ಪ್ರೀತಿಯ ಸಂಕೇತವಾಗಿ ಮೂಡಿಬರುತ್ತದೆ. ಅಂದು ಮಲ್ಲಿಗೆ ದಂಡೆ ತಲೆಯಲ್ಲಿ ಮುಡಿದುಕೊಳ್ಳುವುದೇ ಒಂದು ಹಬ್ಬವಾಗಿತ್ತು. ಇಂದು ಮಲ್ಲಿಗೆ ಮುಡಿಯುವ ದಿನಗಳು ಎಲ್ಲಿ ಹೋದವು ಎನ್ನುತ್ತಾರೆ.

Saturday, April 05, 2008

ಎಮ್. ವಿ. ಕಾಮತ್

ಎಮ್.ವಿ.ಕಾಮತ್‌ರ ಆತ್ಮಚರಿತ್ರೆ :

`ಎ ರಿಪೋರ್ಟರ್ ಎಟ್ ಲಾರ್ಜ್' (A Reporter at Large) ಸರಣಿ ರೂಪದಲ್ಲಿ ದಟ್ಸ್‌ಕನ್ನಡದಲ್ಲಿ ಪ್ರಕಟವಾಗಲಿದೆ. ಕನ್ನಡಾಭಿಮಾನ, ಭಾರತಪ್ರೇಮ ಹಾಗೂ ಸನಾತನ ಮೌಲ್ಯಗಳು ಪುಸ್ತಕದ ತುಂಬ ಹಾಸುಕೊಕ್ಕಾಗಿವೆ. ಇದು ಈಗಿನ ಪೀಳಿಗೆಯ ಪತ್ರಕರ್ತರು ಓದಲೇಬೇಕಾದ ಪುಸ್ತಕವೆಂದರೂ ತಪ್ಪಾಗಲಾರದು.ಸಂಗ್ರಹಾನುವಾದ : ಡಾ 'ಜೀವಿ' ಕುಲಕರ್ಣಿ, ಪೀಠಿಕೆ: ನಾನು ಪುಸ್ತಕಪ್ರಿಯ. ಇಂಗ್ಲೀಷಿನಲ್ಲಿ ಬಹಳ ಓದುವ ಚಟ ಇದ್ದವರಿಗೆ `ಪುಸ್ತಕದಹುಳ' (bookworm) ಎನ್ನುತ್ತಾರೆ. ಉತ್ತಮ ಪುಸ್ತಕ ಓದುವವರಿಗೆ ಹಾಗೆ ಅನ್ನಲಾಗುವುದಿಲ್ಲ. ಅದಕ್ಕಾಗಿ ನಾನು ಒಂದು ಶಬ್ದ ಟಂಕಿಸಿದ್ದೇನೆ (ಕಾಯಿನ್ ಮಾಡಿದ್ದೇನೆ). ಅದು `ಪುಸ್ತಕದಭ್ರಮರ' (bookbee). ನಾವು ಪುಸ್ತಕ-ಕುಸುಮದಿಂದ ಅದರ ಮಕರಂದ ಸವಿಯಬೇಕು. ತಾನು ಸವಿದ ಜೇನು ಇತರರಿಗೆ ಹಂಚಬೇಕು. ನನ್ನ ಒಬ್ಬ ಮಿತ್ರ ಹೇಳುತ್ತಿದ್ದ, `ನಾನು ಒಪ್ಪತ್ತು ಊಟ ಬಿಡಬಹುದು, ಆದರೆ ಒಂದು ಒಳ್ಳೆಯ ಪುಸ್ತಕ ಕೈಗೆ ಸಿಕ್ಕರೆ ಅದನ್ನು ಬಿಡಲಾರೆ' ಎಂದು. ಇತ್ತೀಚೆಗೆ ಐದು ದಿನಗಳ ಯೋಗ ಶಿಬಿರ ನಡೆಸಲು ಶಿರಸಿಗೆ ಹೋಗಿದ್ದೆ. ಅದನ್ನು ಅಯೋಜಿಸಿದವರು ಶಿರಸಿಯ ಅತ್ಯಂತ ಪ್ರಮುಖ ಹಾಗೂ ಪ್ರಭಾವಿ ವ್ಯಕ್ತಿ, ಜನಸೇವಕ ಹಾಗೂ ಕರ್ಮಯೋಗಿ ಎಸ್.ವಿ.ಸೋಂದೆ ಅವರು. `ನೀವು ಮುಂಬೈಯ ಎಂ.ವಿ.ಕಾಮತರ ಆತ್ಮಚರಿತ್ರೆ ಓದಿದ್ದೀರಾ?' ಎಂದು ಕೇಳಿದರು. `ಅದರ ಬಗ್ಗೆ ಕೇಳಿದ್ದೇನೆ, ಅದು ನನಗೆ ಸಿಕ್ಕಿಲ್ಲ.' ಎಂದೆ. ಸೋಂದೆ ಅಂದರು, ``ಅವರ ಆತ್ಮಚರಿತ್ರೆ `ಎ ರಿಪೋರ್ಟರ್ ಎಟ್ ಲಾರ್ಜ' ಬಗ್ಗೆ ಒಂದು ಆಂಗ್ಲ ಪತ್ರಿಕೆಯಲ್ಲಿ ಓದಿದೆ. ನಮ್ಮ ಶಿರಸಿಯ ಪಂಡಿತ ಪಬ್ಲಿಕ್ ಲೈಬ್ರರಿಗೆ ತರಿಸಲು ಗ್ರಂಥಪಾಲರಿಗೆ ತಿಳಿಸಿದೆ. ಬಹಳ ಚೆನ್ನಾಗಿ ಇದೆ.' ಲೈಬ್ರರಿಯಿಂದ ತರಿಸಿ ಕೊಡುವುದಾಗಿ ಸೋಂದೆ ಹೇಳಿದರು. ಅದು ಲೈಬ್ರರಿಯಲ್ಲಿ ಇರಲಿಲ್ಲ. ಹುಬ್ಬಳ್ಳಿಯಲ್ಲಿದ್ದ ಸೋಂದೆ ಅವರ ಅಳಿಯ ಧಾಕಪ್ಪ ಓದಲು ಒಯ್ದಿದ್ದರು. ಮುಂಬೈಗೆ ಹೋದ ಮೇಲೆ ನೋಡುವೆ ಅಂದೆ. ನಂತರ ಧಾರವಾಡದಲ್ಲಿಯ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಮೂರು ದಿನಗಳ `ಯೋಗಶಿಬಿರ' ನಡೆಸಲು ಬಂದಾಗ ನನಗೆ ಒಂದು ಅಚ್ಚರಿಯೇ ಕಾಯ್ದಿತ್ತು. ಕುರಿಯರ್ ಮೂಲಕ ಕಾಮತರ ಆತ್ಮಚರಿತ್ರೆ ನಾನು ಧಾರವಾಡದಲ್ಲಿ ತಂಗಿದ್ದ ಮನೆಗೆ ಬಂದಿತ್ತು. ಸೋಂದೆಯವರ ಕಾರ್ಯ ವೈಖರಿ ನೋಡಿ ಬೆರಗಾಗಿ ಅವರಿಗೆ ಫೋನು ಮಾಡಿ ಕೃತಜ್ಞತೆ ತಿಳಿಸಿದೆ. ಇಷ್ಟು ಪೀಠಿಕೆ ಸಾಕು. ಭಾರತದ ಪತ್ರಿಕಾ ಪ್ರಪಂಚದಲ್ಲಿ ಶಿರೋಭೂಷಣ ಪತ್ರಕರ್ತರೂ, ಪದ್ಮಭೂಷಣರೂ, ಹೆಮ್ಮೆಯ ಮುಂಬೈ ಕನ್ನಡಿಗರೂ ಆಗಿರುವ ಮಾಧವ ವಿಠ್ಠಲರಾವ ಕಾಮತ ಅವರ ಆತ್ಮಚರಿತೆ `ಎ ರಿಪೋರ್ಟರ್ ಎಟ್ ಲಾರ್ಜ್' ಓದಲು ತೊಡಗಿದೆ. ಪುಸ್ತಕದ ತುಂಬೆಲ್ಲ ಅವರ ಕನ್ನಡಾಭಿಮಾನ, ಭಾರತಪ್ರೇಮ ಹಾಗೂ ಸನಾತನ ಮೌಲ್ಯಗಳ ಬಗ್ಗೆ ಅವರಿಗೆ ಇದ್ದ ಗೌರವಾದರಗಳನ್ನು ನಾನು ಬಹುವಾಗಿ ಮೆಚ್ಚತೊಡಗಿದೆ. ಈ ಪುಸ್ತಕಕ್ಕೆ ಮುನ್ನುಡಿ ಬರೆದ, `ದಿ ಹಿಂದೂ' ಪತ್ರಿಕೆಯ ಸಂಪಾದಕ, ಎನ್.ರಾಮ್ ಬರೆಯುತ್ತಾರೆ,"This is an extraordinary book, its appeal extending far beyond the community of journalists. It is indeed a reflective analysis of the history of modern India from a sensitive mind that could also observe the happenings from a vintage point. It offers insight into the world of diplomacy, politics and journalism in a way that has few parallels."(ಇದೊಂದು ಅಸಾಧಾರಣ ಗ್ರಂಥ. ಇದು ಪತ್ರಕರ್ತರ ಕುಟುಂಬದ ಎಲ್ಲೆಗಳನ್ನು ಮೀರಿ ನಿಲ್ಲುವ ಪುಸ್ತಕ. ಇಲ್ಲಿ ಸೂಕ್ಷ್ಮಗ್ರಾಹಿ ಕುಶಾಗ್ರ ಮನವೊಂದು, ಮಹತ್ವದ ಸ್ಥಾನದಲ್ಲಿ ನಿಂತುಕೊಂಡು, ಭಾರತದ ಆಧುನಿಕ ಇತಿಹಾಸವನ್ನು, ಆಗುಹೋಗುಗಳನ್ನು ನಿರೀಕ್ಷಿಸಿದೆ ಮತ್ತು ಬಿಂಬಿಸುವಂತೆ ವಿಶ್ಲೇಷಿಸಿದೆ. ಇಲ್ಲಿರುವ ಒಳನೋಟ ಹೇಗಿದೆ ಎಂದರೆ ಮುತ್ಸದ್ದಿತನ, ರಾಜಕಾರಣ ಮತ್ತು ಪತ್ರಿಕೋದ್ಯಮಗಳ ಪ್ರಪಂಚದಲ್ಲಿಯೇ ಅಪರೂಪದ್ದಾಗಿದೆ ಎನ್ನಬಹುದು.) ಉತ್ತಮ ಪುಸ್ತಕಗಳನ್ನು ಪ್ರಕಾಶಿಸುವಲ್ಲಿ ವಿಶ್ವಮಾನ್ಯತೆ ಪಡೆದ `ಭಾರತೀಯ ವಿದ್ಯಾಭವನ'ದ ಹೆಮ್ಮೆಯ ಪ್ರಕಟನೆ ಇದಾಗಿದೆ. ಜಸ್ಟಿಸ್ ಛಾಗ್ಲಾ ಅವರ `ರೋಸಸ್ ಇನ್ ಡಿಸೆಂಬರ್' (Roses in December)ನಿಂದ ಪ್ರಾರಂಭಿಸಿ ಇಲ್ಲಿಯ ವರೆಗೆ 48 ಆತ್ಮಚರಿತ್ರೆಗಳನ್ನು ಇವರು ಪ್ರಕಟಿಸಿದ್ದಾರೆ. ಅಲ್ಲದೆ 99 ಹಿರಿಯ ವ್ಯಕ್ತಿಗಳ ಜೀವನ ಚರಿತ್ರೆಗಳನ್ನೂ ಪ್ರಕಟಿಸಿದ್ದಾರೆ. ಅದರಲ್ಲಿ ಲೂಯಿ ಫಿಶರ್ ಬರೆದ, `ಮಹಾತ್ಮಾ ಗಾಂಧಿ: ಹಿಸ್ ಲೈಫ್ ಅಂಡ್ ಟೈಮ್ಸ್' (Mahatma Gandhi: His Life and Times), ಸಚ್ಚಿದಾನಂದರು ಬರೆದ `ಲೋಕನಾಯಕ ಜೆ.ಪಿ. ಮ್ಯಾನ್ ಆಫ್ ದಿ ಸೆಂಚುರಿ' (Lok Nayak J.P. Man of the century) ಕೂಡ ಇವೆ. ಶಿವರಾಮ ಕಾರಂತರ ಆತ್ಮಚರಿತ್ರೆ, `ಹುಚ್ಚು ಮನಸ್ಸಿನ ಹತ್ತು ಮುಖಗಳು'(Ten Faces of a Crazy Mind)ನ್ನೂ ಪ್ರಕಟಿಸಿದ್ದಾರೆ. ಭಾರತೀಯ ವಿದ್ಯಾ ಭವನದ ಪ್ರಕಾಶನಗಳ ಪ್ರಧಾನ ಸಂಪಾದಕರಾದ ರಾಮಕೃಷ್ಣ ಅವರು ಬರೆದ ಮುನ್ನುಡಿ ಇದೆ. ಅದರಲ್ಲಿ ಒಂದು ಘಟನೆಯ ಬಗ್ಗೆ ಬರೆಯುತ್ತಾರೆ. 1946ರಲ್ಲಿ ಮೇ 14ರಂದು ಮಹಾತ್ಮಾ ಗಾಂಧಿಯವರು ತಮ್ಮ ಬಲಗೈ ಬಂಟನಂತಿದ್ದ ಸರದಾರ ವಲ್ಲಭಭಾಯಿ ಪಟೇಲರೊಂದಿಗೆ, ಸಿಮ್ಲಾದಲ್ಲಿ ನಡೆದ ಐತಿಹಾಸಿಕ ಸಭೆ (ಬ್ರಿಟಿಷ್ ಕ್ಯಾಬಿನೆಟ್ ಕಳಿಸಿದ ಮಿಷನ್ ಸದಸ್ಯರೊಡನೆ ಮೀಟಿಂಗ್) ಮುಗಿಸಿ ಸಿಮ್ಲಾದಿಂದ ಮುಂಬೈಗೆ ಬರಲಿರುವ ಟ್ರೇನಿನಲ್ಲಿ, ವಿಶೇಷ ಜನತಾ ಬೋಗಿಯಲ್ಲಿ, ಪ್ರವಾಸಿಸುತ್ತಿರುವಾಗ ಲೋಣಾವಳಾದ ಬಳಿ ಗಾಡಿ ಗಕ್ಕನೆ ನಿಂತಿತು. ಎಲ್ಲರೂ ತಲ್ಲಣಗೊಂಡರು. ಆದರೆ ಗಾಂಧಿ ಮಾತ್ರ ನಿರಾತಂಕವಾಗಿ ಮಲಗಿದ್ದರಂತೆ. ಗಾಡಿ ನಿಲ್ಲಲು ಕಾರಣ ಹಳಿಯ ಮೇಲೆ ಯಾರೋ ದುಷ್ಕರ್ಮಿಗಳು ಬಂಡೆಗಲ್ಲನ್ನು ಇರಿಸಿದ್ದರಂತೆ. ಇದು ಭಾರಿ ಸುದ್ದಿಯಾಯ್ತು. ಅದರ ಪ್ರತ್ಯಕ್ಷ ವರದಿ ಮಾಡಲು ದಾದರ ಸ್ಟೇಶನ್‌ಗೆ ತರುಣ ವರದಿಗಾರರೊಬ್ಬರು ಬಂದಿದ್ದರರಂತೆ. ಆ ತರುಣ ವರದಿಗಾರ ಬೇರೆಯಾರಲ್ಲ ಎಂ.ವಿ.ಕಾಮತ್ ಆಗಿದ್ದರು ಎಂದು (ಆ ಬೋಗಿಯಲ್ಲಿ ಉಪಸ್ಥಿತರಿದ್ದ) ರಾಮಕೃಷ್ಣ ಬರೆಯುತ್ತಾರೆ. ವಿಶೇಷ ವರದಿ ಪ್ರಕಟಿಸುವಲ್ಲಿ ಫೀ ಪ್ರೆಸ್ ಸಂಪಾದಕ ಸದಾನಂದರಲ್ಲಿ ಕಾಮತರು ಟ್ರೇನಿಂಗ್ ಪಡೆಯುತ್ತಿದ್ದರು. ವಿದೇಶದಲ್ಲಿ ಹಲವು ವರ್ಷ ದುಡಿದು ಭಾರತಕ್ಕೆ ಮರಳಿದ ಮೇಲೆ ಭಾರತೀಯ ವಿದ್ಯಾ ಭವನದವರು ನಡೆಸುತ್ತಿರುವ ಡಾ ರಾಜೇಂದ್ರಪ್ರಸಾದ `ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಅಂಡ್ ಮ್ಯಾನೇಜ್‌ಮೆಂಟ್' (Institute of Communication and Management)ನ ಜರ್ನಲಿಸಂ ವಿಭಾಗದ ಮುಖ್ಯಸ್ಥರಾಗಿ ಎಮ್. ವಿ. ಕಾಮತ ಸೇವೆಸಲ್ಲಿಸಿದ ವಿಷಯವನ್ನೂ ನೆನೆಯುತ್ತಾರೆ. ಕಾಮತರು ಪಿ.ಟಿ.ಐ.ವರದಿಗಾರರಾಗಿ ದುಡಿದಿದ್ದಾರೆ, ಇಪ್ಪತ್ತು ವರ್ಷ ಯುನೈಟೆಡ್ ನೇಶನ್ಸ್‌ನ ಮುಖ್ಯ ಕಚೇರಿಯಲ್ಲಿದ್ದು ವರದಿ ಕಳಿಸಿದ್ದಾರೆ, ಟೈಮ್ಸ್ ಆಫ್ ಇಂಡಿಯಾದ ಪ್ರತಿನಿಧಿಯಾಗಿ ಬಾನ್(ಜರ್ಮನಿ), ಪ್ಯಾರಿಸ್(ಫ್ರಾನ್ಸ್), ವಾಶಿಂಗ್‌ಟನ್ ಡಿ.ಸಿ.(ಅಮೇರಿಕಾ)ಗಳಲ್ಲಿ ದುಡಿದಿದ್ದಾರೆ. ನಿವೃತ್ತಿ ಪೂರ್ವದಲ್ಲಿ `ಇಲಸ್ಟ್ರೇಟೆಡ್ ವೀಕ್ಲಿ'ಯ ಸಂಪಾದಕರಾಗಿದ್ದರು. ನಿವೃತ್ತಿಯ ನಂತರವೂ ಪ್ರಸಾರ ಮಾಧ್ಯಮಗಳ ಬಗ್ಗೆ ಪತ್ರಿಕೆಗಳಿಗೆ ಬರೆಯತ್ತಲೇ ಇದ್ದಾರೆ. ಕಾಮತರು `ಲೇಖಕನ ನುಡಿ'ಯಲ್ಲಿ ಒಂದು ಮಾತು ಹೇಳುತ್ತಾರೆ. `ಇದು ಹಾಗೆ ನೋಡಿದರೆ ಆತ್ಮಚರಿತ್ರೆಯಲ್ಲ. ನನ್ನ ಜೀವನ ಹಾಗೂ ನಾನು ಜೀವಿಸಿದ ಕಾಲದ ಬಗ್ಗೆ ನಾನು ಬರೆದ ಸುದೀರ್ಘ ಟಿಪ್ಪಣಿ' ಎಂದು. ಅವರ ಆತ್ಮಚರಿತ್ರೆಯಲ್ಲಿ ಭಾರತದ ಇತಿಹಾಸವಿದೆ, ನಾಡಿನ ಮತ್ತು ವಿಶ್ವದ ಮಹಾನ್ ವ್ಯಕ್ತಿಗಳ ದರ್ಶನವಿದೆ, ಸಂದರ್ಶನವಿದೆ. ಈ ಗ್ರಂಥದಲ್ಲಿ ಏಳು ಅಧ್ಯಾಯಗಳಿವೆ. ಮೊದಲನೆಯ ಅಧ್ಯಾಯ, `ನನ್ನ ಎಲ್ಲಾ ನಿನ್ನೆಗಳು' (ALL MY YESTERDAYS). ಇದಕ್ಕೂ ಒಂದು ಮುನ್ನುಡಿ ಇದೆ. ಕಾಮತರು ಮಹಾತ್ಮಾ ಗಾಂಧಿ ಹಾಗೂ ಜವಾಹರಲಾಲ ನೆಹರೂ ಅವರ ಆತ್ಮಚರಿತ್ರೆಗಳ ಬಗ್ಗೆ ಬರೆಯುತ್ತಾರೆ, ಅವುಗಳ ಅನನ್ಯತೆಯನ್ನು ಮೆಚ್ಚುತ್ತಾರೆ. ಜಸ್ಟಿಸ್ ಛಾಗ್ಲಾ ಅವರ ಆತ್ಮಚರಿತ್ರೆ `ರೋಸಸ್ ಇನ್ ಡಿಸೆಂಬರ್'(Roses in December)ನ್ನು ಭಾರತೀಯ ವಿದ್ಯಾಭವನದವರು 1973ರಲ್ಲಿ ಪ್ರಕಟಿಸಿದರು. ಅದರ 12ನೇ ಸಂಸ್ಕರಣವು 2000ದಲ್ಲಿ ಪ್ರಕಟವಾಯಿತು. ಅವರ ಮಗ ಇಕ್ಬಾಲ್ ಮುನ್ನುಡಿ ಬರೆದಿದ್ದಾರೆ. ಮಗನೇ ಈ ಪುಸ್ತಕಕ್ಕೆ ಕಾರಣ ಆದುದನ್ನು ಮೆಚ್ಚುತ್ತಾರೆ. ನೆಹರು ಕ್ಯಾಬಿನೆಟ್‌ನಲ್ಲಿ ಮಂತ್ರಿಯಾಗಿದ್ದ ಮುಂಬೈ ರಾಜಕಾರಣಿ ಎಸ್.ಕೆ.ಪಾಟೀಲರ ಬಗ್ಗೆ ಬರೆಯುತ್ತಾರೆ. ಗಾಂಧಿಯವರರೇ ಇವರನ್ನು ಮುಂಬೈಯ `ಅನಭಿಷಿಕ್ತ ದೊರೆ' (Uncrowned King) ಎಂದು ಕರೆದಿದ್ದರಂತೆ. ಮೂರು ಸಲ ಮುಂಬೈ ಮಹಾನಗರ ಪಾಲಿಕೆಯ ಮೇಯರ್ ಆಗುವ ಭಾಗ್ಯ ಇವರೊಬ್ಬರ ಹಿರಿಮೆಯಾಗಿತ್ತು. ಹಣ ಸಂಗ್ರಹಿಸುವುದರಲ್ಲಿ ಇವರು ನಿಸ್ಸೀಮರಾಗಿದ್ದರು. ಇವರು ತಮ್ಮ ಜೀವನದ ಬಗ್ಗೆ ಕೆಲವು ಟಿಪ್ಪಣಿಗಳನ್ನು ಬರೆದಿಟ್ಟಿದ್ದರಂತೆ. ಅವರ ಮಗ ಟಿಪ್ಪಣಿಗಳನ್ನು ಸಂಪಾದಿಸುವ ಕೆಲಸವನ್ನು ಕೈಕೊಳ್ಳಲು ಕಾಮತರನ್ನು ಕೇಳಿದಾಗ ಇವರು ಬಹಳ ಸಂತೋಷದಿಂದ ಒಪ್ಪಿ ಆ ಕೆಲಸ ಮಾಡಿದರಂತೆ. ಪತ್ರಕರ್ತರ ಆತ್ಮಚರಿತ್ರೆಗಳಲ್ಲಿ ಮಹತ್ವದ ಕೃತಿ ನ್ಯಾಶನಲ್ ಹೆರಾಲ್ಡ್ ಸಂಪಾದಕ ಎಮ್ ಚಲಪತಿರಾವ್ ಅವರದು ಎನ್ನುತ್ತಾರೆ. ಒಮ್ಮೆ ಪ್ರಸಿದ್ಧ ಸಿನೆ ತಾರೆ ಶಬನಾ ಆಜ್ಮಿಯ ಆಮಂತ್ರಣದ ಮೇರೆಗೆ ಅವಳ ಮನೆಗೆ ಹೋಗಿದ್ದರಂತೆ. ಅವಳು ತನ್ನ ವೃದ್ಧ ತಂದೆ ತಾಯಿಗಳನ್ನು ಪರಿಚಯಿಸಿದಾಗ ಇವರು ಅವರ ಕಾಲು ಮುಟ್ಟಿ ನಮಸ್ಕರಿಸಿದರಂತೆ. ಅವಳ ತಂದೆ `ಇದೆಲ್ಲ ಬೇಡ' ಎಂದಾಗ ಕಾಮತರು ಉತ್ತರಿಸಿದರಂತೆ, `ಹಿರಿಯರ ಪಾದಸ್ಪರ್ಶಮಾಡಿ ನಮಸ್ಕರಿಸುವುದು ನಮ್ಮ ಮನೆತನದಲ್ಲಿ ಹರಿದು ಬಂದ ಸಂಸ್ಕೃತಿ' ಎಂದು. 2001ರಲ್ಲಿ ಬರೋಡ ವಿಶ್ವವಿದ್ಯಾಲಯದ ಸಮಾಜ ಸೇವಾ ತಂಡದ ವಿದ್ಯಾರ್ಥಿಗಳ ಸಭೆಯನ್ನು ಉದ್ದೇಶಿಸಿ ಕಾಮತರು ಮಾತಾಡುತ್ತಿರುವಾಗ ಈ ಘಟನೆಯನ್ನು ನೆನೆದರಂತೆ. ಇವರ ಭಾಷಣ ಮುಗಿದ ನಂತರ ಒಬ್ಬ ಸುಂದರ ತರುಣಿ ಇವರೆಡೆಗೆ ಬಂದು ಇವರ ಪಾದಗಳನ್ನು ಸ್ಪರ್ಶಿಸಿ ನಮಸ್ಕರಿಸಿದಳಂತೆ. ಆಗ ಕಾಮತರು ಅವಳಿಗೆ, `ಇದೆಲ್ಲ ಬೇಡ' ಎಂದರಂತೆ. ಆಗ ಅವಳು, `ಸರ್, ನಾನು ಕೂಡಾ ನಿಮ್ಮ ಸಂಸ್ಕೃತಿಯಲ್ಲೇ ಬೆಳೆದು ಬಂದವಳು!' ಎಂದು ಉದ್ಗಾರ ತೆಗೆದಳಂತೆ. ಇಂಥ ಸಣ್ಣ ಸಣ್ಣ ಘಟನೆಗಳು ಕೂಡ ಈ ಪುಸ್ತಕದ ಬೆಲೆಯನ್ನು ಹೆಚ್ಚಿಸುತ್ತವೆ. ತರುಣ ಪೀಳಿಗೆ ಕಾಮತರಿಂದ ಕಲಿಯುವುದು ಬಹಳ ಇದೆ. ಉಡುಪಿಯಲ್ಲಿ ಇವರ ನೆರೆಹೊರೆಯಲ್ಲಿ ಕ್ರಿಸ್ತೀಯರು ವಾಸವಾಗಿದ್ದರಂತೆ. ಅವರೊಂದಿಗೆ ಇವರು ಹೇಗೆ ಸಹಭಾವದಿಂದ ಬಾಳಿದರು ಎಂಬ ಬಗ್ಗೆ ಬರೆದಿದ್ದಾರೆ. ಜೊಕಿಂ ಆಳ್ವ, ಮಾರ್ಗರೆಟ್ ಆಳ್ವಾ ಅವರ ಬಗ್ಗೆ ಬರೆಯುತ್ತಾರೆ. ದೀಪಾವಳಿಯ ಸಮಯ ಇವರ ಮನೆಯವರು ಕೆಥೋಲಿಕ್ ಬಾಂಧವರ ಮನೆಗೆ ಸಿಹಿತಿಂಡಿ ಕಳಿಸಿಕೊಡುತ್ತಿದ್ದರಂತೆ. ಅದೇರೀತಿ ಇವರ ಕೆಥೋಲಿಕ್ ಮಿತ್ರರು ಇವರ ಮನೆಗೆ ಕ್ರಿಸ್‌ಮಸ್ ಸಮಯದಲ್ಲಿ ಕೇಕ್ ತಂದುಕೊಡುತ್ತಿದ್ದರಂತೆ. ಯಾವುದೇ ಸಂಪ್ರದಾಯದ ಜನರೇ ಇರಲಿ ಅವರೊಂದಿಗೆ ಕೊಂಕಣಿಯಲ್ಲಿ ಮಾತಾಡಿದಾಗ ಆಗುವ ಸುಖದ ಬಗ್ಗೆ ಬರೆಯುತ್ತಾರೆ. ಕಾಮತರು ಇಲ್ಲಿ ಒಂದು ಮಾತು ಹೇಳುತ್ತಾರೆ