ಪಂಡಿತ ಪುಟ್ಟರಾಜ ಗವಾಯಿಯವರ ಪುಣ್ಯಸ್ಮರಣೆಯ ಆಚರಣೆ ; ಮುಂಬಯಿನಲ್ಲಿ !

ಮೈಸೂರು ಅಸೋಸಿಯೇಷನ್, ಮುಂಬಯಿ  ಹಾಗೂ  'ಗೀಗಿ ಎಂಟರ್‍ಟೈನ್‍ಮೆಂಟ್ ಜೊತೆಗೂಡಿ, ಪದ್ಮಭೂಷಣ ಪುಟ್ಟರಾಜ ಗವಾಯಿಯವರ ಪುಣ್ಯಸ್ಮರಣೆಯನ್ನು ಭಾನುವಾರ  ೧, ಮಾರ್ಚ್ ೨೦೨೦ ರ ಸಂಜೆ ಆಚರಿಸಲಾಯಿತು. ಈ ಸಮಯದಲ್ಲಿ ಪಂಡಿತ ಪುಟ್ಟರಾಜ ಗವಾಯಿಯವರ ಗೀತೆಗಳನ್ನು ಮತ್ತು ಕರ್ನಾಟಕ ಸಂಗೀತವನ್ನೂ ತಮ್ಮ ವಿಶೇಷ ಶೈಲಿಯಲ್ಲಿ ಪ್ರಸ್ತುತಪಡಿಸಿದ ಸಂಗೀತ ವಿದುಷಿ ಶ್ರೀಮತಿ ಚಂದನ ಬಾಲರವರು ಎಲ್ಲರ ಮೆಚ್ಚುಗೆಗೆ ಪಾತ್ರರಾದರು. 

ಪಂಡಿತ. ಪುಟ್ಟರಾಜ ಗವಾಯಿ ಅವರ ಸೂಕ್ಷ್ಮ ಪರಿಚಯ : 

ಹಿಂದುಸ್ತಾನಿ ಮತ್ತು ಕರ್ನಾಟಕ ಶೈಲಿಯ ಸಂಗೀತಗಳಲ್ಲಿ ಕೃಷಿ ಮಾಡಿದ್ದ ಅವರು ಕನ್ನಡ ,ಹಿಂದಿ, ಸಂಸ್ಕೃತದಲ್ಲಿ ಅಧ್ಯಾತ್ಮವನ್ನು ಕುರಿತು ಕೃತಿರಚನೆ ಮಾಡಿದ್ದಾರೆ. ಒಟ್ಟು ೮೦ ಕ್ಕೂ ಮಿಗಿಲಾಗಿ ಪುಸ್ತಕಗಳನ್ನು ಬರೆದಿದ್ದಾರೆ. ತಮ್ಮ  ಗುರುಗಳಾದ ಪಂಚಾಕ್ಷರಿ ಗವಾಯಿಯವರ ಬಗ್ಗೆ ಅಪಾರ ಗೌರವ ಪ್ರೀತಿ. ತಮ್ಮ ಪ್ರೀತಿಯ ಹಿರಿಮೆಯನ್ನು ಕನ್ನಡ ನಾಡಿನಲ್ಲಿ ತಮ್ಮ ಕೃತಿಗಳ ಮುಖಾಂತರ ಸಾರಿದ್ಧಾರೆ. ಅವರು ಮುಖ್ಯವಾಗಿ ಬೆಂಗಳೂರಿನಲ್ಲಿ ಕರ್ನಾಟಕ ಸಂಗೀತವನ್ನು ಕಲಿತು, ತಮ್ಮದೇ ಆದ ಶೈಲಿಯನ್ನು ರೂಢಿಸಿಕೊಂಡು ಅವರ ಗೀತೆಗಳನ್ನು ಹಾಡುವುದರಲ್ಲಿ ಪ್ರಾವೀಣ್ಯತೆಯನ್ನು ಪಡೆದಿದ್ದಾರೆ.   

ಆ ದಿನದ  ಸಂಜೆಯ ಪ್ರಮುಖ ಗಾಯಕಿಯಾಗಿದ್ದ  ಸಂಗೀತ ವಿದುಷಿ, ಶ್ರೀಮತಿ ಚಂದನಬಾಲಾರವರ  ಜೊತೆಗೆ  ಶ್ರೀ ವಿನಾಯಕ್ ಅವರು, ತಬಲಾದಲ್ಲಿ, ಗಿಟಾರ್‍ನ ಮೇಲೆ ಶ್ರೀ ಅಭಯ್ ನ್ಯಾಯಂಪಲ್ಲಿಯವರು, ಮತ್ತು  ಹಾರ್ಮೋನಿಯಂ ಮೇಲೆ, ಶ್ರೀ ಅಭಯ್ ರಾವಂಡೆಯವರು, ಅತ್ಯುತ್ತಮವಾಗಿ ಸಾಥ್ ನೀಡಿ ಕಾರ್ಯಕ್ರಮಕ್ಕೆ ಹೊಳಪು ಕೊಟ್ಟರು. ಈ ಕಾರ್ಯಕ್ರಮಕ್ಕೆ ಗದಗಿನ ವೀರೇಶ್ವರ ಪುಣ್ಯಾಶ್ರಮದ ಆಶೀರ್ವಾದಗಳೂ ದೊರಕಿದ್ದವು.

ಶ್ರೀ. ಪುಟ್ಟರಾಜ ಗವಾಯಿಯವರು, ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತಗಳೆರಡರಲ್ಲೂ ಪರಿಣತರಾಗಿದ್ದು, ಸುಮಾರು ೮೦ ಕ್ಕೂ ಹೆಚ್ಚು ಪುಸ್ತಕಗಳನ್ನು ಕನ್ನಡ, ಸಂಸ್ಕೃತ ಮತ್ತು ಹಿಂದಿಯಲ್ಲಿ ರಚಿಸಿದ್ದಾರೆ. ಆಧ್ಯಾತ್ಮವನ್ನೂ ಕುರಿತು ಬರೆದಿದ್ದಾರೆ. ಅನೇಕ ಶಿಷ್ಯರನ್ನು ಸಂಗೀತದಲ್ಲಿ ಅಣಿ ಮಾಡಿದ ಹಿರಿಮೆ ಕೂಡ ಪುಟ್ಟರಾಜ ಗವಾಯಿಯವರದು. ಶ್ರೀಪಂಚಾಕ್ಷರಿ ಗವಾಯಿಯವರ ಶಿಷ್ಯರಾದ ಇವರು, ತಮ್ಮ ಗುರುಗಳ ಹಿರಿಮೆಯನ್ನು ಕನ್ನಡ ನಾಡಿನಲ್ಲೆಲ್ಲ ಸಾರಿದರು. ಈ ಕಾರ್ಯಕ್ರಮದಲ್ಲಿ ಹಾಡುಗಾರಿಕೆಯನ್ನು ಪ್ರಸ್ತುತಪಡಿಸಿದ  ಶ್ರೀಮತಿ ಚಂದನಬಾಲಾ ಅವರು, ಕರ್ನಾಟಕ ಸಂಗೀತವನ್ನು ಬೆಂಗಳೂರಿನಲ್ಲಿ ಕಲಿತು, ತಮ್ಮದೇ ವಿಶೇಷವಾದ “ಮರ್ಮ” ಶೈಲಿಯನ್ನು ಕೈಗೂಡಿಸಿಕೊಂಡಿದ್ದಾರೆ. ಮೊದಲು ಅವರು “ಪಂಚಾಕ್ಷರೇಶ್ವರ” ಎಂದು ರಾಗವೆತ್ತಿ ಹಲವಾರು ದೇವರನಾಮಗಳನ್ನು ಹಾಡಿದರು.

“ಕಾಗದ ಬಂದಿದೆ ನಮಗೆ ; ಕಮಲನಾಭನಿಂದ ಕಾಗದ ಬಂದಿದೆ” ಜನರೆಲ್ಲರನ್ನೂ ಮುಗ್ಧಗೊಳಿಸಿತು.

ಜಾನಪದ ಶೈಲಿಯಲ್ಲಿ ಅಕ್ಕನ ವಚನವನ್ನು ಹೇಳಿದಾಗ, ಸಭಾಗಾರದಲ್ಲಿರುವವರೆಲ್ಲರೂ “ಗೀಗೀಯಗ” ಹಾಡುತ್ತಿದ್ದರು. 

“ಸಂತೆಯೊಳಗೊಂದು ಮನೆಯ ಮಾಡಿ” ವಚನ ಅಕ್ಕನ ನಿರ್ಲಿಪ್ತತೆ ಹಾಗೂ ಇಂದಿನ ನಾವೇ ನಮಗೆ ಮಾಡಿಕೊಂಡ ತೊಂದರೆಗಳಿಂದ ಬಿಡುಗಡೆ ಎಂತು ಎನ್ನುವುದನ್ನು ಮನಮುಟ್ಟುವಂತೆ ಹಾಡಿದರು. “ಗುರು” ಎಂಬ ಪುಟ್ಟರಾಜ ಗವಾಯಿಯವರೇ ಕಟ್ಟಿದ ವಚನವನ್ನು ಹಾಡಿದರು. 'ಖವ್ವಾಲಿ ಶೈಲಿ'ಯ ಈ ವಚನದಲ್ಲಿ ತರಾನಾವೂ ಸೇರಿತ್ತು. “ಕಲ್ಲನಾಗರ ಕಂಡರೆ ಹಾಲೆರೆಯಂಬರು” ಎಂಬ ಬಸವಣ್ಣನವರ ವಚನವನ್ನು ಇಂಪಾಗಿ ಹಾಡಿದರು.

ಸಂಗೀತ ವಿದುಷಿ, ಚಂದನಬಾಲಾ ಅವರ ಹಾಡಿನಲ್ಲಿ ಜನರ ಮನಸ್ಸನ್ನು ಹೇಗೆ ಮುಟ್ಟಬೇಕೆಂಬ ಜಾಣತನ ಎದ್ದು ತೋರಿತ್ತು. ಹಾಡಿಗೆ ಪುಟ ಎಂತು ಕೊಡಬೇಕು, ತಬಲಾದ ನಾದ ಹಾಡಿಗೆ ಒಡಗೂಡಬೇಕೇ ಹೊರತು, ತಾನೇ ಎದ್ದು ತೋರಬಾರದು ಎನ್ನುವುದನ್ನು ಕಲಿಯುವುದಕ್ಕೆ, ಶ್ರೀ ವಿನಾಯಕ್ ಅವರು ತಬಲಾವನ್ನು ನುಡಿಸುವುದನ್ನು ಕಾಣಬೇಕು ಇಂತಹ ಸಂಗೀತವನ್ನು ಅರಿತ ವಿದ್ವಾಂಸ ಅವರು. ಗಿಟಾರ್‍ನ ಮೇಲೆ ಶ್ರೀ ಅಭಯ್ ನ್ಯಾಯಂಪಲ್ಲಿಯವರು ಮಾನವ ಕೊರಳಿನಂತೇ ನುಡಿಸುತ್ತಿದ್ದದ್ದು ಕೇಳಿದಾಗ ಹಾಡುತ್ತಿರುವವರು ಯಾರು ಎಂದು ಕೇಳುವಂತಾಯ್ತು.ಹಾರ್ಮೋನಿಯಂ ಮೇಲೆ ಶ್ರೀ ಅಭಯ್ ರಾವಂಡೆಯವರು ಜೊತೆ ನೀಡಿದರು. “ಭಾಗ್ಯದ ಲಕ್ಷ್ಮೀ ಬಾರಮ್ಮಾ” ಹಾಡಿನಿಂದ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು.

ಕಾರ್ಯಕ್ರಮವನ್ನು ವೀಕ್ಷಿಸಲು ಮುಂಬಯಿ ನಗರದ ಹಲವು ಕಡೆಗಳಿಂದ ಬಂದ ಪ್ರಮುಖರಲ್ಲಿ, ವಿದುಷಿ. ಡಾ. ಶ್ಯಾಮಲಾ ಪ್ರಕಾಶ್, ಡಾ. ಭವಾನಿ, ವಿಧುಷಿ ಶ್ಯಾಮಲಾ ರಾಧೇಶ್, ಶ್ರೀಮತಿ ಮತ್ತು  ಶ್ರೀ ವಸಂತ್, ಮೊದಲಾದವರಿದ್ದರು. ಈ ಕಾರ್ಯಕ್ರಮವನ್ನು ಒಡಗೂಡಿಸಿದವರು ಮೈಸೂರು ಅಸೋಸಿಯೇಷನ್, ಹಾಗೂ  ಶ್ರೀ ರಾಜಶೇಖರ್, ಶ್ರೀಮತಿ ಲಕ್ಷ್ಮೀ ರಾಜಶೇಖರ್, ಹಾಗೂ ಶ್ರೀಮತಿ ಶ್ಯಾಮಲಾ ರಾಧೇಶ್. ಆದರೆ, 'ಈ ಸಂಗೀತ ಸಂಜೆ ಇಷ್ಟು ಬೇಗ ಮುಗಿದು ಹೋಯಿತಲ್ಲಾ' ಎಂದು ಬೆರಗಾಗಿ ಕೇಳುಗರೆಲ್ಲಾ ಇನ್ನೂ ಸಭಾಗಾರದಲ್ಲಿ ಮೆಲುಕು ಹಾಕುತ್ತಾ ನಿಂತಿದ್ದರು.

-ಸೌಜನ್ಯತೆ : ಮೈಸೂರು ಅಸೋಸಿಯೇಷನ್, ಮುಂಬಯಿ 
Comments

Popular posts from this blog

ಗಾಂಧಿ ಸ್ಮೃತಿ 2019 !

ಗೊಬ್ಬರದ ಮೇಲೆ ಬರೆವುದೆ ಕಬ್ಬಮಂ ? ಹಾ - ಕುವೆಂಪು.

Uttar dakshin, a Music concert by stalwarts like Smt/Shri. Kumareshan and Pt. Ulhas N.Kashalkarji